ಮೈಸೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಅಭಿಯಾನದ ಪಾದಯಾತ್ರೆ ಕಾರ್ಯಕ್ರಮದಲ್ಲಿ ಬಿ.ವೈ.ವಿಜಯೇಂದ್ರ ಮಾತನಾಡಿದರು. ಸಿ.ಟಿ.ರವಿ, ಎನ್.ಮಹೇಶ್, ರವಿಕುಮಾರ್, ಯದುವೀರ ಕೃಷ್ಣದತ್ತಚಾಮರಾಜ ಒಡೆಯರ್, ಪ್ರತಾಪಸಿಂಹ, ಪ್ರೀತಂಗೌಡ, ತೋಂಟದಾರ್ಯ, ಮಲ್ಲಿಕಾರ್ಜುನಪ್ಪ ಇತರರು ಇದ್ದರು.
ಮೈಸೂರು

ರೈತರಿಗೆ ಭಿಕ್ಷೆ ಬೇಡ, ಸೂಕ್ತ ಪರಿಹಾರ ನೀಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹ

ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ

ಮೈಸೂರು: ತೀವ್ರ ಬರದ ನಡುವೆ ಜನ ಸಾಮಾನ್ಯರು ತತ್ತರಿಸಿರುವಾಗ ಕಾಂಗ್ರೆಸ್ ಸರ್ಕಾರ, ದರ ಏರಿಕೆಯ ಬರೆ ಹಾಕಿದೆ. ಮತ್ತೊಂದೆಡೆ ಅನ್ನದಾತನ ಕೈ ಹಿಡಿಯಬೇಕಿದ್ದ ಆಡಳಿತ ವರ್ಗ ರೈತರಿಗೆ ಭಿಕ್ಷೆ ಹಾಕುವಂತೆ 2,500 ರೂ. ಪರಿಹಾರ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಬಿಜೆಪಿಯಿಂದ ‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿ’ ಅಭಿಯಾನದ ಅಂಗವಾಗಿ ನಗರದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗಮಟ್ಟದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಹಿಂದೆಂದೂ ಕಾಣದ ಬರ ಪರಿಸ್ಥಿತಿ ಆವರಿಸಿದೆ. ಜನರು ಬೆಲೆ ಏರಿಕೆ ಬಿಸಿಯಲ್ಲಿ ತತ್ತರಿಸಿರುವ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಹಾಲು, ಬಸ್ ದರ ಏರಿಕೆ ಮಾಡುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. ಅಲ್ಲದೇ ಸಂಕಷ್ಟದ ಸಮಯದಲ್ಲಿ ರೈತರ ನೆರವಿಗೆ ಬರಬೇಕಿದ್ದ ಸರ್ಕಾರ, ಭಿಕ್ಷೆ ನೀಡುವಂತೆ 2500 ರೂ. ಪರಿಹಾರ ನೀಡುವುದಾಗಿ ಹೇಳಿದೆ. ಆ ಹಣವೂ ರೈತರ ಕೈ ಸೇರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್, 4ನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿ ಅಗುತ್ತಾರೆ ಎನ್ನುವ ಆತಂಕದಲ್ಲಿದೆ. ಅದಕ್ಕಾಗಿ ಜನರನ್ನು ದಾರಿ ತಪ್ಪಿಸುವ ಸಲುವಾಗಿ ಎಸ್‌ಐಆರ್, ನೀಟ್ ಇನ್ನಿತರ ವಿಷಯ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನಿವಾಸಿ ವಿರೋಧ ಪಕ್ಷದ ನಾಯಕ

ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ದೊಡ್ಡ ಶಕ್ತಿಯಾಗಿ ಪರಿವರ್ತನೆ ಹೊಂದಿದೆ. ಹೀಗಾಗಿ 15 ವರ್ಷದಿಂದ ಅಧಿಕಾರ ಇಲ್ಲದೇ ಹತಾಸೆಯಲ್ಲಿರುವ ರಾಹುಲ್‌ಗಾಂಧಿ, ಸತತ ನಾಲ್ಕನೇ ಬಾರಿಯೂ ನರೇಂದ್ರಮೋದಿ ಅವರೇ ಪ್ರಧಾನಿ ಆಗುತ್ತಾರೆ ಎಂದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ದೂರಿದರು.

ರಾಹುಲ್ ಗಾಂಧಿಯೂ ಅನಿವಾಸಿ ವಿರೋಧ ಪಕ್ಷದ ನಾಯಕ ಆಗಿದ್ದಾರೆ. ಸದನ ನಡೆಯುವ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುವ ಅವರು, ಸದನ ಮುಗಿಯುತ್ತಿದ್ದಂತೆಯೇ ವಿದೇಶಗಳಿಗೆ ಹಾರುತ್ತಾರೆ. ಅವರು ಎಲ್ಲಿ ಹೋಗುತ್ತಾರೆ ಎನ್ನುವುದು ಅವರಿಗಷ್ಟೇ ತಿಳಿದಿದೆ. ಹೀಗಾಗಿ ರಾಹುಲ್‌ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದರು.

ದೇಶ ಅಭಿವೃದ್ಧಿಯತ್ತ ಮುನ್ನಡೆಯುತ್ತಿದ್ದು, ಭಯೋತ್ಪಾದನೆ ನಿರ್ಮೂಲನೆಯಾಗಿದೆ. ನಕ್ಸಲಿಸಂ ಕಿತ್ತು ಹಾಕಲಾಗಿದೆ. ದೇಶದಲ್ಲಿ ಶಾಂತಿಯುತ ಪರಿಸ್ಥಿತಿ ಇದೆ. ಹೀಗಾಗಿ ಭಾರತದ ಪ್ರಗತಿ ಸಹಿಸಲು ಸಾಧ್ಯವಾಗದೇ ಕಮ್ಮಿ ನಿಷ್ಠೆ ಉಳ್ಳವರನ್ನು ಕರೆದುಕೊಂಡು ಅರಾಜಕತೆ ಸೃಷ್ಟಿಸುವ ಮೂಲಕ ದೇಶಕ್ಕೆ ಬೆಂಕಿ ಹಾಕುವ ಕೆಲಸವನ್ನು ರಾಹುಲ್‌ಗಾಂಧಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಜಾರ್ಖಂಡ್ ಸಚಿವ ಅನ್ಸಾರಿ, ರಾಹುಲ್ ಗಾಂಧಿ ಮನಸ್ಸು ಮಾಡಿದರೆ 40 ಲಕ್ಷ ಜನರು ಬೀದಿಗಿಳಿದು ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ ಎಂದಿದ್ದಾರೆ. ಇಂಥ ಅರಾಜಕತೆಯ ಕನಸು ಕಾಣುವವರ ವಿರುದ್ಧ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಕಾಂಗ್ರೆಸ್ ಕಿತ್ತು ಹಾಕೋಣ

ಹಿಂದೂಗಳನ್ನು ಕಡೆಗಣಿಸುತ್ತಿರುವುದರಿಂದ ಕರ್ನಾಟಕದಲ್ಲಿ ಸಂಭ್ರಮದಿಂದ ಗಣಪತಿ ಹಬ್ಬ ಆಚರಿಸಲು ಸಾಧ್ಯವಾಗದ ಸ್ಥಿತಿ ಇದೆ. ದೀಪಾವಳಿ, ದಸರಾ ಸಂದರ್ಭದಲ್ಲಿ ಬೆಲೆ ಏರಿಕೆ ಮಾಡಿ ಕಾಂಗ್ರೆಸ್ ಜನರಿಗೆ ತೊಂದರೆ ನೀಡಿದೆ. ಇದು ಬಡವರ ವಿರೋಧಿ, ಜನವಿರೋಧಿ ಸರ್ಕಾರ. ಈ ಕಾಂಗ್ರೆಸ್ ಅನ್ನು ಮನೆಗೆ ಕಳಿಸಲು ನಾವೆಲ್ಲರೂ ಸಿದ್ಧರಾಗಬೇಕು. ರೈತವಿರೋಧಿ, ಯುವಜನರ ವಿರೋಧಿ, ಹಿಂದೂ ವಿರೋಧಿ ಸರ್ಕಾರವನ್ನು ಕಿತ್ತು ಹಾಕಲು ಮುಂದಾಗೋಣ ಎಂದು ವಿಜಯೇಂದ್ರ ಮನವಿ ಮಾಡಿದರು.

ಬಾಂಗ್ಲಾ, ಶ್ರೀಲಂಕ ಮಾದರಿ ಅರಾಜಕತೆ ಸೃಷ್ಟಿ ಹುನ್ನಾರ

ನೆರೆಯ ಬಾಂಗ್ಲಾದೇಶ, ಶ್ರೀಲಂಕಾದಲ್ಲಿ ನಡೆದ ರಾಜಕೀಯ ಅಸ್ಥಿರತೆ ಹಾಗೂ ಜನಾಂದೋಲನ ಮಾದರಿಯಲ್ಲಿ ಭಾರತದಲ್ಲಿಯೂ ಅರಾಜಕತೆ ಸೃಷ್ಟಿಸಿ ಕೇಂದ್ರ ಸರ್ಕಾರವನ್ನು ಉರುಳಿಸಬೇಕು ಎಂಬ ಉದ್ದೇಶ ಕಾಂಗ್ರೆಸ್ ನಾಯಕರು ಹೊಂದಿದಂತಿದೆ. ಅದಕ್ಕಾಗಿ ಚುನಾವಣೆಯಲ್ಲಿ ಗೆಲ್ಲಲಾಗದೆ ‘ರೆಜಿಮ್‌ಚೇಂಜ್’ ಮಾತನ್ನಾಡುತ್ತಿದ್ದಾರೆ ಎಂದು ವಿಜಯೇಂದ್ರ ಟೀಕಿಸಿದರು.

ಆದರೆ, ಪ್ರಜಾಪ್ರಭುತ್ವದ ಸಂವಿಧಾನದಡಿ ನಡೆಯುತ್ತಿರುವ ಭಾರತದಲ್ಲಿ ಇದೆಲ್ಲ ಸಾಧ್ಯವಿಲ್ಲ. ಚುನಾವಣೆ ಮೂಲಕ ಮಾತ್ರ ಸರ್ಕಾರ ಬದಲಾವಣೆ ಸಾಧ್ಯ ಎನ್ನುವ ಸತ್ಯವನ್ನು ಕಾಂಗ್ರೆಸ್‌ನವರು ಅರಿತಿದ್ದರೂ ಕಾಂಗ್ರೆಸ್‌ನ ಮುಖವಾಣಿಯಂತಿರುವ ಜಿರಲೆ ಪಕ್ಷದೊಂದಿಗೆ ಸೇರಿ ಹಿಂಸಾಚಾರ ಹುಟ್ಟು ಹಾಕಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.