ತಿ.ನರಸೀಪುರ ತಾಲೂಕಿನ ಮೂಗೂರು ಗ್ರಾಮದಲ್ಲಿ ಆಯೋಜಿಸಿದ್ದ ರೈತ ಮೋರ್ಚಾ ಪದಾಧಿಕಾರಿಗಳಾಗಿ ಪದಗ್ರಹಣ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಎಂ.ರೇವಣ್ಣ, ರಮೇಶ್ ಕುಮಾರ್, ಹಿರಿಯೂರು ಶಿವಕುಮಾರ್, ಸೋಮಶೇಖರಪ್ಪ, ಎಸ್.ಬಿ.ಸುರೇಶ್, ಆರ್.ಶಿವಕುಮಾರ್ ಇತರರು ಇದ್ದರು. Swearing-in Ceremony of BJP Raitha Morcha Office-Bearers
ಮೈಸೂರು

ರೈತರ ಸಮಸ್ಯೆಗಳಿಗೆ ನೆರವಾಗಿ

ಡಾ.ಎಂ.ರೇವಣ್ಣ ಸಲಹೆ

ತಿ.ನರಸೀಪುರ: ಹಳ್ಳಿಗಳಲ್ಲಿ ರೈತರ ವಿಶ್ವಾಸ ಗಳಿಸುವ ಮೂಲಕ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಬಿಜೆಪಿ ಮುಖಂಡ ಹಾಗೂ ಹಿರಿಯ ಶಸ್ತ್ರಚಿಕಿತ್ಸಕ ಡಾ.ಎಂ.ರೇವಣ್ಣ ಕರೆ ನೀಡಿದರು.

ತಾಲೂಕಿನ ಮೂಗೂರು ಗ್ರಾಮದಲ್ಲಿರುವ ರತ್ನಸಭಾ ಭವನದಲ್ಲಿ ಶನಿವಾರ ಸಂಜೆ ಬಿಜೆಪಿ ರೈತ ಮೋರ್ಚಾ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ನೇಮಕ ಹಾಗೂ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಥಳೀಯವಾಗಿ ರೈತರ ಸಮಸ್ಯೆಗಳನ್ನು ಆಲಿಸುವುದರ ಜತೆಗೆ ಅವರಿಗೆ ನೆರವಾಗಬೇಕು. ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ಜವಾಬ್ದಾರಿಯನ್ನು ಬಿಜೆಪಿ ರೈತ ಮೋರ್ಚಾದ ಪದಾಧಿಕಾರಿಗಳ ಮೇಲಿದೆ ಎಂದರು.

ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರದ ಅವಧಿಯಲ್ಲಿ ರೈತರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಹೈನುಗಾರಿಕೆಗೆ ಪ್ರೋತ್ಸಾಹ, ಜಾನುವಾರುಗಳ ಆರೋಗ್ಯ ರಕ್ಷಣೆ, ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ರೈತ ವಿದ್ಯಾನಿಧಿ ಹಾಗೂ ಕೃಷಿ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಗಳು ರೈತರಿಗೆ ಅನುಕೂಲವಾಗಿದ್ದವು. ಕೇಂದ್ರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಜತೆಗೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಆರ್ಥಿಕ ನೆರವು ನೀಡಲಾಗುತ್ತಿತ್ತು. ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರೈತಪರ ಯೋಜನೆಗಳಿಗೆ ಸಮರ್ಪಕ ಆದ್ಯತೆ ದೊರೆಯುತ್ತಿಲ್ಲ ಎಂದು ಡಾ.ಎಂ.ರೇವಣ್ಣ ಟೀಕಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೆಬ್ಬೆಹುಂಡಿ ಶಿವಕುಮಾರ್, ರೈತ ಮೋರ್ಚಾ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ನೂತನ ಪದಾಧಿಕಾರಿಗಳ ನೇಮಕ ಹಾಗೂ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿದೆ. ರೈತರು ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಅವರ ಸಂಕಷ್ಟಗಳಿಗೆ ಸ್ಪಂದಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ್ ಕುಮಾರ್ ಮಾತನಾಡಿ, ಕೇಂದ್ರದ ರೈತಪರ ಯೋಜನೆಗಳ ಅರಿವು ಮೂಡಿಸಿ ಎಂದು ಸಲಹೆ ನೀಡಿದರು. ಕ್ಷೇತ್ರದ ರೈತ ಮೋರ್ಚಾ ಅಧ್ಯಕ್ಷ ಸೋಮಶೇಖರಪ್ಪ, ಹಿರಿಯ ಮುಖಂಡ ಕರೋಹಟ್ಟಿ ಮಹದೇವಯ್ಯ ಮಾತನಾಡಿದರು.

ರೈತ ಮೋರ್ಚಾಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಈ ವೇಳೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಬಳಿಕ ಪಕ್ಷದ ಬಾವುಟಗಳನ್ನು ಹಸ್ತಾಂತರಿಸುವ ಮೂಲಕ ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಪಕ್ಷದ ಸಂಘಟನೆಯನ್ನು ಗ್ರಾಮಮಟ್ಟದಲ್ಲಿ ಬಲಪಡಿಸುವುದರ ಜತೆಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸಂಘಟನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ತಿಳಿಸಲಾಯಿತು.

ಕ್ಷೇತ್ರ ಉಸ್ತುವಾರಿ ಕಿರಣ್ ಜಯರಾಮೇಗೌಡ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಎಸ್.ಬಿ.ಸುರೇಶ್, ಬದನವಾಳು ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಬಿ.ಶಿವಕುಮಾರ್, ಕ್ಷೇತ್ರಾಧ್ಯಕ್ಷ ಹಿರಿಯೂರು ಶಿವಕುಮಾರ್, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ..ಎಂ.ಪ್ರಕಾಶ್, ನಿರ್ದೇಶಕ ಪೂಜಿತ್ ಮೆಡಿಕಲ್ ಪಿ.ಕುಮಾರ್, ಒಬಿಸಿ ಜಿಲ್ಲಾ ಕಾರ್ಯದರ್ಶಿ ಕೆ.ಮಹದೇವಶೆಟ್ಟಿ, ಬಿ.ವೀರಭದ್ರಪ್ಪ, ಎಂ.ಎಂ. ಜಯಣ್ಣ ಮೂಗೂರು, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಭಾಗ್ಯಾ, ಮಹದೇವಪ್ಪ, ಯುವ ಮೋರ್ಚಾ ಅಧ್ಯಕ್ಷ ರಘು, ಕೆ.ವಿ.ಶಿವಶಂಕರ್, ತೊಂಟೇಶ್, ವಾಟಾಳ್ಪುರ ಸುರೇಶ್, ಕರೋಹಟ್ಟಿ ರಾಜಶೇಖರ್, ಅರವಿಂದ್, ನಂದನ್, ಚಿನ್ನು ತಲಕಾಡು, ಕನ್ನಹಳ್ಳಿ ಪಾಪಣ್ಣ, ಮಹೇಶ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ರೈತ ಮೋರ್ಚಾದ ನೂತನ ಪದಾಧಿಕಾರಿಗಳು ಇದ್ದರು.