ಎಂ.ಲಕ್ಷ್ಮಣ್  Discrimination in returning taxes to the state: KPCC spokesperson M. Lakshman lashes out
ಮೈಸೂರು

ರಾಜ್ಯಕ್ಕೆ ತೆರಿಗೆ ವಾಪಸ್ ನೀಡುವಲ್ಲಿ ತಾರತಮ್ಯ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿ

ಕೇಂದ್ರ ಸರ್ಕಾರದ ವಿರುದ್ಧ ಆರೋಪ

ಮೈಸೂರು: ದೇಶದಲ್ಲಿ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಿಂದ ಹೆಚ್ಚಿನ ಆದಾಯ ತೆರಿಗೆ, ಜಿಎಸ್‌ಟಿ ಸಂಗ್ರಹವಾಗುತ್ತಿದೆ. ಆದರೆ, ನಮ್ಮ ರಾಜ್ಯದಿಂದ ಸಂಗ್ರಹವಾಗುವ ತೆರಿಗೆ ಮೊತ್ತಕ್ಕೂ ಮತ್ತು ನಮಗೆ ವಾಪಸ್ ಕೊಡುವುದಕ್ಕೆ ಸಾಕಷ್ಟು ವ್ಯತ್ಯಾಸ ಇದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರವು ತಾರತಮ್ಯ ಮಾಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಕಿಡಿಕಾರಿದರು.

ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಬರಗಾಲ, ಕಬ್ಬು ಬೆಳೆಗಾರರ ವಿಚಾರದ ಕುರಿತು ಬಾಯಿ ಬಿಡಲಿಲ್ಲ. ಸಿಎಂ ಡಿ.ಕೆ.ಶಿವಕುಮಾರ್ ರಾಜ್ಯದ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಯಾವುದೇ ಸಮಸ್ಯೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ತೆರಿಗೆ ಮೊತ್ತದ ಹಂಚಿಕೆಯಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ ರಾಜ್ಯಗಳಿಗೆ ನೀಡುವ ಮೊತ್ತ ನೋಡಿದರೆ ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಮಾಡಲಾಗುತ್ತಿದೆ ಎಂದೂ ದೂರಿದರು.

ಕರ್ನಾಟಕದಿಂದ 2.62 ಲಕ್ಷ ಕೋಟಿ ರೂ. ಆದಾಯ ತೆರಿಗೆ, 1.75 ಲಕ್ಷ ಕೋಟಿ ರೂ. ಜಿಎಸ್‌ಟಿ ಸೇರಿದಂತೆ ವಿವಿಧ ತೆರಿಗೆ ಮೂಲಗಳಿಂದ ಅಂದಾಜು 4.65 ಲಕ್ಷ ಕೋಟಿ ರೂ. ಕೇಂದ್ರ ಸರ್ಕಾರಕ್ಕೆ ಪಾವತಿಯಾಗಿದೆ. ಆದರೆ, ರಾಜ್ಯಕ್ಕೆ 65 ಸಾವಿರ ಕೋಟಿ ರೂ. ಮಾತ್ರ ವಾಪಸ್ ಬರುತ್ತಿದೆ.

ಉತ್ತರ ಪ್ರದೇಶದಲ್ಲಿ 2.95 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾದರೆ 2.55 ಲಕ್ಷ ಕೋಟಿ ರೂ. ವಾಪಸ್ ಕೊಡಲಾಗಿದೆ. ಮಹಾರಾಷ್ಟ್ರದಲ್ಲಿ 4 ಲಕ್ಷ ಕೋಟಿ ರೂ. ಕೇಂದ್ರಕ್ಕೆ ಹೋದರೆ, ವಾಪಸ್ 2 ಲಕ್ಷ ಕೋಟಿ ರೂ. ಹೋಗಿದೆ. ಆದರೆ, ಕರ್ನಾಟಕಕ್ಕೆ ಮಾತ್ರ ತೆರಿಗೆ ಮೊತ್ತದ ಹಂಚಿಕೆಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬಿಜೆಪಿ ನಾಯಕರು ಬರೀ ಪೇಪರ್ ಟೈಗರ್‌ಗಳು. ವಿವಿಧ ರಾಜ್ಯದಲ್ಲಿ ವ್ಯವಸ್ಥಿತವಾಗಿ ಮತವನ್ನು ಕಳ್ಳತನ ಮಾಡಿ ಅಧಿಕಾರಕ್ಕೆ ಬಂದಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ದಿನ ಬೆಳಗಾದರೆ ರಾಜ್ಯ ಸರ್ಕಾರದ ಮೇಲೆ ಸುಳ್ಳು ಹೇಳಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕೇಂದ್ರ ಸಚಿವರು ಜನರನ್ನು ಮೂರ್ಖರನ್ನಾಗಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ನಮ್ಮಿಂದ ಎಷ್ಟು ತೆರಿಗೆ ವಸೂಲಿ ಮಾಡಲಾಗುತ್ತಿದೆ ಎನ್ನುವುದನ್ನು ಹೇಳಬೇಕು ಹೊರತು ಕೊಟ್ಟಿರುವುದನ್ನು ಹೇಳುವುದಲ್ಲ ಎಂದು ಕುಟುಕಿದರು.

ಮೈಸೂರು ಸಂಸದರು ಮೂರು ವರ್ಷಗಳಿಂದ ಐದು ಪೈಸೆ ತಂದಿಲ್ಲ. ಜನರಿಗೆ ಅನುಕೂಲ ಆಗುವ ಯೋಜನೆಗಳನ್ನೂ ತಂದಿಲ್ಲ. ಹಿಂದಿನ ಕಾಮಗಾರಿಗಳ ಪರಿಶೀಲನೆ ಮಾಡಿ ಒಂದು ಫೋಟೋ ಹಾಕಿಕೊಳ್ಳುವುದಾಗಿದೆ ಎಂದು ಟೀಕಿಸಿದರು.

ದಸರಾದ ಯಶಸ್ಸು ಸಹಿಸದೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮೂರು ಪುಟಗಳ ಪತ್ರವನ್ನು ಬರೆದರು. ದಸರಾ ಯಾವ ರೀತಿ ಯಶಸ್ವಿಯಾಯಿತು ಎನ್ನುವುದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಅಶ್ವಿನ್‌ಕುಮಾರ್ ಅವರು ಇಲ್ಲಿಯವರೆಗೆ ಎಲ್ಲಿದ್ದರು? ಎಂಬುದೇ ಗೊತ್ತಿಲ್ಲ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದಿನ ಬೆಳಗಾದರೆ ಕಾಂಗ್ರೆಸ್ ಸರ್ಕಾರ ಟೀಕಿಸುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಮೋದಿ ಅವರೇ ಸಿಎಂ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಬೈಯುವುದಕ್ಕೆ ಕುಮಾರಸ್ವಾಮಿಗೆ ಸುಪಾರಿ ಕೊಟ್ಟಿದ್ದಾರೆ ಎಂದು ಹೇಳಿದರು.