ಮೈಸೂರು: ಪೌರಾಣಿಕತೆಯ ಮೆರುಗು, ಪರಿಸರದ ಅರಿವು, ದೇವಿ ವೈಭವ, ಕರುನಾಡಿನ ಸಾಂಸ್ಕೃತಿಕ ಭವ್ಯತೆ...!
ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗಮಂದಿರದಲ್ಲಿ 4ನೇ ದಿನವಾದ ಗುರುವಾರ ಸಂಜೆ ನಡೆದ ‘ಯುವ ಸಂಭ್ರಮ’ದಲ್ಲಿ ಅನಾವರಣಗೊಂಡಿತು.
ಬರೋಬರಿ 45 ಕಾಲೇಜು ತಂಡಗಳು ತಮ್ಮ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಿ ನೆರೆದವರನ್ನು ರಂಜಿಸಿದವು. ಬೆಂಗಳೂರು, ಚನ್ನಪಟ್ಟಣ, ಪಾಂಡವಪುರ, ಮಂಗಳೂರು, ಮೇಲುಕೋಟೆ, ಚಾಮರಾಜನಗರ, ಕೊಡಗು ಹೀಗೆ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾಲೇಜು ತಂಡಗಳ ಸದಸ್ಯರು ವಿವಿಧ ಪ್ರದರ್ಶಕ ಕಲೆಗಳನ್ನು ಸೊಗಸಾಗಿ ಪ್ರಸ್ತುತಪಡಿಸಿ ಸಭಿಕರ ಮನಗೆದ್ದರು.
ವರ್ಣರಂಜಿತ ವೇದಿಕೆಯಲ್ಲಿ ಸಾಲುಮರದ ತಿಮ್ಮಕ್ಕ, ರಾಮಾಯಣದ ಪಾತ್ರಧಾರಿಗಳು, ಶಿವ, ಬಸವ, ಮೈಸೂರು ಮಹಾರಾಜರು, ನವಿಲು, ಹುಲಿ...ಹೀಗೆ ವಿವಿಧ ವೇಷಧಾರಿಗಳು ಬಂದು ಹೋದರು. ಜತೆಗೆ, ಮಹನೀಯರ ಕೊಡುಗೆ, ಸಾಧನೆಯನ್ನೂ ಸಂಗೀತ, ನೃತ್ಯದ ಮೂಲಕ ಪರಿಚಯಿಸಿದರು.
ಸಂವಿಧಾನ, ಹಕ್ಕು-ಕರ್ತವ್ಯ, ಸೈನ್ಯದಲ್ಲಿ ಸಿಂಧೂರದ ಸಿಂಹಿಣಿಯರು, ಕನ್ನಡ ಕವಿ, ಸಾಹಿತ್ಯ ಪರಂಪರೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚರಿತ್ರೆ, ಕೃಷಿ ಕುರಿತು ಅರಿವು, ಪರಿಸರ ಸಂರಕ್ಷಣೆ, ಯೋಧರ ಪಾತ್ರ...ಹೀಗೆ ವಿವಿಧ ವಿಷಯ ಪರಿಕಲ್ಪನೆಯನ್ನು ನೃತ್ಯ ರೂಪಕದ ಮೂಲಕ ಪ್ರಸ್ತುತಪಡಿಸಿದರು. ದಸರಾದ ಗಜಪಡೆಯ ಮಾಜಿ ನಾಯಕ ಅರ್ಜುನ ಆನೆಯ ಕುರಿತು ಹಾಡಿನ ಮೂಲಕ ಕಟ್ಟಿಕೊಡಲಾಯಿತು.
ಲಿಂಗ ಸಮಾನತೆಯೊಂದಿಗೆ ಮಹಿಳಾ ಸಬಲೀಕರಣ, ಮಹಿಳಾ ಸ್ವಯಂ ರಕ್ಷಣಾ ಕಲೆಯನ್ನೂ ಪ್ರದರ್ಶಿಸಲಾಯಿತು. ಮಾನವ ಮತ್ತು ಪ್ರಾಣಿ ಸಂಘರ್ಷ, ಅರಣ್ಯ ಸಂರಕ್ಷಣೆ, ಸ್ವಾತಂತ್ರೃ ಚಳವಳಿ, ಹೋರಾಟಗಾರರ ಕೊಡುಗೆಯನ್ನು ವೇದಿಕೆಯಲ್ಲಿ ತೆರೆದಿಡಲಾಯಿತು.
ಹಳೇ, ಹೊಸ ಗೀತಗಾಯನಗಳ ಸಂಯೋಜನೆಗೆ ಮೊರೆ ಹೋದ ತಂಡಗಳು, ನೃತ್ಯದ ಮೂಲಕ ವಿವಿಧ ವಿಷಯಗಳನ್ನು ಸಭಿಕರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಿದವು. ಪ್ರತಿ ತಂಡಗಳಿಗೆ 5 ನಿಮಿಷ ಮಾತ್ರ ಕೊಡಲಾಯಿತು. ಇಷ್ಟು ಅವಧಿಯಲ್ಲೇ ಸಭಿಕರನ್ನು ಮನರಂಜಿಸಲು ಪ್ರಯತ್ನಿಸಿದವು. ಪ್ರದರ್ಶನದ ಬಳಿಕ ಪ್ರತಿ ತಂಡಗಳಿಗೆ ಸ್ಮರಣಿಕೆ ನೀಡಿ ವಿದ್ಯಾರ್ಥಿಗಳನ್ನು ಉತ್ತೇಜಿಸಲಾಯಿತು.
ವೇದಿಕೆಯಲ್ಲಿ ಸಂಗೀತ, ನೃತ್ಯ, ಗೀತೆಯ ಅಬ್ಬರ ರಿಂಗಣಿಸುತ್ತಿದ್ದರೆ, ಇತ್ತ ಸಭಿಕರ ವಲಯದಲ್ಲೂ ಇದಕ್ಕೆ ಪ್ರತಿಕ್ರಿಯೆ ದೊರೆಯುತ್ತಿತ್ತು. ಜನಪ್ರಿಯ ಹಾಡು, ಸಂಗೀತಕ್ಕೆ ನಿಂತಲ್ಲೇ ಹೆಜ್ಜೆ ಹಾಕಿ ಸಂಭ್ರಮಿಸಿದರು.