ರಾಜ್ಯಮಟ್ಟದ ಯೋಗಾಸನ ಸ್ವರ್ಧೆಗೆ ಟಿ.ಎಸ್.ಶ್ರೀವತ್ಸ ಚಾಲನೆ ನೀಡಿದರು. ಅಯೂನ್ ಖಾನ್, ರಮೇಶ್, ಗಣೇಶ್ ಇತರರು ಇದ್ದರು.  
ಮೈಸೂರು

ಯೋಗಕ್ಕೆ ಜಾತಿ, ಧರ್ಮ, ವರ್ಣ ಭೇದವಿಲ್ಲ: ಶಾಸಕ ಟಿ.ಎಸ್.ಶ್ರೀವತ್ಸ ಅಭಿಮತ

ರಾಜ್ಯಮಟ್ಟದ ಯೋಗಾಸನ ಸ್ವರ್ಧೆ

ಮೈಸೂರು: ಭಾರತೀಯ ಪರಂಪರೆಯಲ್ಲಿ ಬೆಳೆದು ಬಂದ ಯೋಗ, ಇಂದು ವಿಶ್ವದೆಲ್ಲೆಡೆ ಪ್ರಸರಿಸುತ್ತಿದ್ದು, ಮೈಸೂರಿಗೂ ಯೋಗ ನಗರಿಯ ಖ್ಯಾತಿ ಇದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಬಣ್ಣಿಸಿದರು.

ದಸರಾ ಅಂಗವಾಗಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ವರ್ಧೆ ಉದ್ಘಾಟಿಸಿ ಮಾತನಾಡಿದರು.

ಮೈಸೂರು ಎಂದರೇ ಅರಮನೆ, ಗುರುಮನೆ, ಯೋಗಮನೆ. ಮೈಸೂರು ನಗರವು ಯೋಗಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಪಡೆಯುವುದಲ್ಲದೆ ಯೋಗದಲ್ಲಿಯೇ ಗಿನ್ನಿಸ್ ದಾಖಲೆ ಮಾಡಲಾಗಿದೆ. ರಾಜಾಶ್ರಯದಿಂದ ಹಿಡಿದು, ಪ್ರಜಾಪ್ರಭುತ್ವವರೆಗೂ ಲಕ್ಷಾಂತರ ಜನರಿಗೆ ಯೋಗ ಕಲಿಸುತ್ತಿದೆ ಎಂದರು.

ಭಾರತದ ನೆಲದಲ್ಲಿ ಆರಂಭಗೊಂಡ ಯೋಗವನ್ನು ಕಳೆದ 12 ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಜೂ.21ರಂದು ಮೈಸೂರಿನ ಅರಮನೆಯ ಮುಂಭಾಗ 15 ಸಾವಿರಕ್ಕೂ ಹೆಚ್ಚು ಜನ, ಇಡೀ ಮೈಸೂರಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಯೋಗ ಮಾಡುವ ಮೂಲಕ ದೊಡ್ಡ ಯಶಸ್ಸು ಕಂಡಿದೆ ಎಂದರು.

ಮುಂಬರುವ 2027ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಇಡೀ ರಾಜ್ಯದಲ್ಲಿ 2 ಕೋಟಿ ಜನ ಯೋಗ ಮಾಡುವಂತೆ ಪ್ರೇರೇಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.

ಯೋಗ ದಸರ ಉಪ ಸಮಿತಿ ವಿಶೇಷ ಅಧಿಕಾರಿ ಕೆ.ರಮ್ಯಾ ಮಾತನಾಡಿ, ಪ್ರತಿದಿನ ಮುಂಜಾನೆ ಬೇಗ ಎದ್ದು, ಚಳಿ-ಮಳೆ ಲೆಕ್ಕಿಸದೆ ನೋವನ್ನು ಸಹಿಸಿಕೊಂಡು ಮಾಡಿದ ಸಾಧನೆಯೇ ಇಂದು ನಿಮ್ಮನ್ನು ಎಚ್ಚರ ಸ್ಥಾನಕ್ಕೆ ಏರಿದೆ. ಧೈರ್ಯದಿಂದ ಈ ವೇದಿಕೆಯಲ್ಲಿ ಭಾಗವಹಿಸಿರುವುದು ನಿಮ್ಮ ಮೊದಲ ಗೆಲುವಾಗಿದ್ದು, ಇಲ್ಲಿರುವ ಪ್ರತಿಯೊಬ್ಬರೂ ಈಗಾಗಲೇ ವಿಜೇತರಾಗಿದ್ದಾರೆ ಎಂದರು.

ಗೆದ್ದಾಗ ಅಹಂಕಾರ ಪಡದೆ, ಸೋತಾಗ ನಿರಾಶರಾಗದೆ ಇರುವುದೇ ನಿಜವಾದ ಯೋಗಿಯ ಗುಣಲಕ್ಷಣ. ಸ್ಪರ್ಧೆಯ ಸಮಯದಲ್ಲಿ ಯಾವುದೇ ಆತಂಕಕ್ಕೆ ಒಳಗಾಗದೆ, ಇತರರ ಪ್ರದರ್ಶನವನ್ನು ನೋಡಿ ನಿಮ್ಮ ಸಾಮರ್ಥ್ಯವನ್ನು ಕಡೆಗಣಿಸಬೇಡಿ. ಶಾಂತವಾದ ಮನಸ್ಸಿನಿಂದ, ಏಕಾಗ್ರತೆ ಹಾಗೂ ಆತ್ಮವಿಶ್ವಾಸದಿಂದ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಎಂದು ಸಲಹೆ ನೀಡಿದರು.

ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯುಬ್ ಖಾನ್, ಪ್ರಾಧಿಕಾರದ ಸಿಇಒ ರುದ್ರೇಶ್, ಕಾರ್ಯಾಧ್ಯಕ್ಷ ನಿರೂಪ್‌ವೆಸ್ಲಿ, ಕಾರ್ಯದರ್ಶಿ ಡಾ.ಸಿ.ರೇಣುಕಾದೇವಿ, ಮೈಸೂರು ಯೋಗ ಕೂಟದ ಅಧ್ಯಕ್ಷ ರಮೇಶ್, ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ಪಶುಪತಿ, ಯೋಗ ದಸರಾ ಉಪಸಮಿತಿ ಸದಸ್ಯರು ಇದ್ದರು.

ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗಿ

ಯೋಗ ದಸರಾ ಉಪಸಮಿತಿ ಆಯೋಜಿಸಿರುವ ರಾಜ್ಯಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಒಟ್ಟು 1,526 ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿತ ಒಟ್ಟು ಸ್ಪರ್ಧಿಗಳಲ್ಲಿ 851 ಮಹಿಳಾ ವಿಭಾಗ, 675 ಪುರುಷ ವಿಭಾಗದವರು ಇದ್ದಾರೆ. ವಿಶೇಷ ಎಂದರೆ 93 ಅಂಗವಿಕಲರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, 78 ವರ್ಷದ ಹಿರಿಯರೂ ಸ್ಪರ್ಧಿಯಾಗಿದ್ದಾರೆ. ವಿವಿಧ ವಯೋಮಾನದಲ್ಲಿ ಆಯೋಜಿಸಿರುವ ಸ್ಪರ್ಧೆಯಲ್ಲಿ 30 ಜಿಲ್ಲೆಗಳಿಂದ ಆಗಮಿಸಿದ್ದಾರೆ.