ಹುಣಸೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ದಿನೇಶ್ ಅಮೀನ್‌ಮಟ್ಟು, ಕೆ.ಬಸವರಾಜ್, ನಾ.ದಿವಾಕರ ಇದ್ದರು. 
ಮೈಸೂರು

ಯುವ ಮನಸ್ಸುಗಳಿಗೆ ನಾಟದ ನೆಹರು ಸಾಧನೆಗಳು

ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯ

ಹುಣಸೂರು: ಯುವಕರು ಇತಿಹಾಸವನ್ನು ಅರಿಯುವ ಪ್ರಯತ್ನವನ್ನೇ ಮಾಡುತ್ತಿಲ್ಲ. ಹೀಗಾಗಿ ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಅವರ ಸಾಧನೆಗಳು ಇತ್ತೀಚಿನ ಯುವ ಮನಸ್ಸುಗಳಿಗೆ ನಾಟುತ್ತಿಲ್ಲ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏಕಲವ್ಯ ಅಧ್ಯಯನ ಕೇಂದ್ರ ಭಾನುವಾರ ಏರ್ಪಡಿಸಿದ್ದ ಆಧುನಿಕ ಭಾರತದ ನಿರ್ಮಾಣದಲ್ಲಿ ಜವಾಹರಲಾಲ್ ನೆಹರು ಅವರ ಪಾತ್ರ ವಿಷಯ ಕುರಿತ ವಿಚಾರ ಗೋಷ್ಠಿಯಲ್ಲಿ ಮಾತನಾಡಿದರು. ನೆಹರು ಅವರು ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡಾಗ ಭಾರತ ಎಲ್ಲ ವಿಚಾರಗಳಲ್ಲೂ ಖಾಲಿಯಾಗಿತ್ತು. ದೇಶದಲ್ಲಿ ಆರ್ಥಿಕ, ಸಾಮಾಜಿಕ ಮುಂತಾದ ಕ್ಷೇತ್ರಗಳು ಅಸಂಖ್ಯಾತ ಸಮಸ್ಯೆಗಳನ್ನು ಎದುರಿಸುತ್ತಿದ್ದವು. ನೆಹರು ದೇಶದ ಸಾಮಾಜಿಕ ಸಾಮರಸ್ಯಕ್ಕೆ ಹೆಚ್ಚು ಆದ್ಯತೆ ನೀಡಿದರಲ್ಲದೆ ನೀರಾವರಿಗಾಗಿ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿದರು. ಸಾರ್ವಜನಿಕ ಉದ್ಯಮ, ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚು ಬಂಡವಾಳ ತೊಡಗಿಸಿ ಕೃಷಿ ಕ್ಷೇತ್ರದ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು ಎಂದರು.

ದೇಶದ ತುಂಬೆಲ್ಲ ವೈಜ್ಞಾನಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು. ಪಂಚವಾರ್ಷಿಕ ಯೋಜನೆಗಳ ಮೂಲಕ ಭಾರತವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ಪ್ರಯತ್ನ ಮಾಡಿದರು. ಈಗ ಇವೆಲ್ಲಾ ಇತಿಹಾಸದ ಕಾಲ ಗರ್ಭವನ್ನು ಸೇರಿಕೊಂಡಿದ್ದು ಇಂದಿನ ಯುವ ಜನಾಂಗ ಇವೆಲ್ಲವನ್ನೂ ಅರಿಯುವ ಪ್ರಯತ್ನ ಮಾಡುತ್ತಿಲ್ಲ. ಈಗಿನ ಸರ್ಕಾರ ಇದಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತಿದೆ. ನಮ್ಮೆಲ್ಲ ಶಿಕ್ಷಣಗಳೂ ಉದ್ಯೋಗಾವಕಾಶ ಆಧಾರಿತವಾಗಿಯೇ ಹೊರತು ಜ್ಞಾನವನ್ನು ವೃದ್ಧಿಗೊಳಿಸುವ ಯಾವ ಪ್ರಯತ್ನವನ್ನೂ ಮಾಡದೆ ಸೋಲುತ್ತಿವೆ ಎಂದರು.

ಲೇಖಕ ನಾ.ದಿವಾಕರ ಮಾತನಾಡಿ, ಇತ್ತೀಚಿನ ಕಾಲಘಟ್ಟದಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವಗಳು ಮರೆಯಾಗುತ್ತಿದ್ದು ಇತಿಹಾಸವನ್ನು ತಿರುಚುವ ಕೆಲಸವಾಗುತ್ತಿದೆ. ಹೀಗಾಗಿ ಬಸವ, ಬುದ್ಧ, ಗಾಂಧಿ ಮತ್ತು ನೆಹರು ಅವರಂತಹ ಮಹಾಪುರುಷರನ್ನು ಖಳ ನಾಯಕರಂತೆ ಚಿತ್ರಿಸಲಾಗುತ್ತಿದೆ. ಮಹಾಪುರುಷರ ಮತ್ತು ಘನತೆವೆತ್ತ ವ್ಯಕ್ತಿಗಳ ಹತ್ಯೆಯನ್ನು ಸಂಭ್ರಮಿಸುವ ಕೆಲಸವನ್ನು ಸಾಮಾಜಿಕ ಜಾಲತಾಣಗಳು ಮಾಡುತ್ತಿವೆ. ನೆಹರೂ, ಗಾಂಧಿ ಮತ್ತು ಡಾ.ಅಂಬೇಡ್ಕರ್ ಅವರ ಹೆಜ್ಜೆ ಗುರುತುಗಳನ್ನು ಅಳಿಸಿಹಾಕುವುದು ಸಾಧ್ಯವಿಲ್ಲ ಎಂದರು.

ಏಕಲವ್ಯ ಅಧ್ಯಯನ ಕೇಂದ್ರದ ಅಧ್ಯಕ್ಷ ಕೆ.ಬಸವರಾಜ್, ಕಾರ್ಯದರ್ಶಿ ಎಚ್.ಡಿ.ಬೀರೇಶ್ವರ, ಸದಸ್ಯರಾದ ಸಾಹಿತಿ ಜೆ.ಮಹಾದೇವ್ ಕಲ್ಕುಣಿಕೆ, ಶಿಕ್ಷಕರಾದ ಮಾದೇಗೌಡ, ಗಂಗಾಧರ್, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಗೋವಿಂದೇಗೌಡ, ಉಪನ್ಯಾಸಕ ಭೀಮನಹಳ್ಳಿ ಮಹದೇವ್, ದಲಿತ ಸಂಘರ್ಷ ಸಮಿತಿಯ ಮುಖಂಡರು ಉಪಸ್ಥಿತರಿದ್ದರು. ಪ್ರಬಂಧ, ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ಮತ್ತು ಪಿ.ಯು.ಕಾಲೇಜು ಮಕ್ಕಳಿಗೆ ಪ್ರಮಾಣಪತ್ರ ಮತ್ತು ನಗದು ಬಹುಮಾನ ನೀಡಲಾಯಿತು.