Renowned music artists participate in Yuva Dasara
ಮೈಸೂರು

ಯುವ ದಸರಾದಲ್ಲಿ ಖ್ಯಾತ ಸಂಗೀತ ಕಲಾವಿದರು ಭಾಗಿ

ಅ.13ರಿಂದ 17ರವರೆಗೆ ಯುವ ದಸರಾ ಕಲಾವಿದರ ಪಟ್ಟಿ ಬಿಡುಗಡೆ ಪ್ರತಿದಿನ ಹೊಸತನ, ಸಂಗೀತದ ರಸದೌತಣ

ಮೈಸೂರು: ನಾಡಹಬ್ಬ ದಸರಾದಲ್ಲಿ ಅತ್ಯಂತ ವರ್ಣರಂಜಿತ ಕಾರ್ಯಕ್ರಮವಾದ ಯುವ ದಸರಾದಲ್ಲಿ ಭಾಗಿಯಾಗುವ ಕಲಾವಿದರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಯುವ ದಸರಾ ಕಾರ್ಯಕ್ರಮವು ‘ಪ್ರತಿದಿನ ಹೊಸತನ ಸಂಗೀತದ ರಸದೌತಣ’ ಎಂಬ ಧೇಯ್ಯವಾಕ್ಯದೊಂದಿಗೆ ನಗರದ ಹೊರವರ್ತುಲ ರಸ್ತೆಯ ಉತ್ತನಹಳ್ಳಿ ಜ್ಞಾಲಾಮುಖಿ ತ್ರಿಪುರಸುಂದರಿ ದೇವಸ್ಥಾನದ ಸಮೀಪ ಮೈದಾನದಲ್ಲಿ ಅ.13ರಿಂದ 17ರವರೆಗೆ ನಡೆಯಲಿದೆ

ನಿತ್ಯ ಸಂಜೆ 5.30ರಿಂದ ರಾತ್ರಿ 7.30ರವರೆಗೆ ಸ್ಥಳೀಯ ಹಾಗೂ ವಿವಿಧ ಭಾಗಗಳ ಆಯ್ಕೆಯ ಕಲಾವಿದರಿಂದ ವಿವಿಧ ಕಾರ್ಯಕ್ರಮ ಪ್ರದರ್ಶನವಾಗಲಿದ್ದು, ಬಳಿಕ ರಾತ್ರಿ 7.30ರಿಂದ 10.30ರವರೆಗೆ ಖ್ಯಾತ ಕಲಾವಿದರ ಸಂಗೀತ ಕಾರ್ಯಕ್ರಮ ನಡೆಯಲಿವೆ.

ಅ.13ರಂದು ನೃತ್ಯ ನಿರ್ದೇಶಕ ಹಾಗೂ ನಟ ಪ್ರಭುದೇವ ಯುವ ದಸರಾ ಉದ್ಘಾಟಿಸುವರು. ನಗರಾಭಿವೃದ್ಧಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಇತರರು ಭಾಗಿಯಾಗಲಿದ್ದಾರೆ.

ಅ.13ರಂದು ಹೆಸರಾಂತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಗಾನಸುಧೆ ಹರಿಸಲಿದ್ದು, ಅವರ ತಂಡದ ಗಾಯಕರಾದ ಆಬಿ.ಬಿ, ನಕಾಶ್ ಅಜೀಜ್, ವಾಸುಕಿ ವೈಭವ್, ಸಾಯಿ ವಿಘ್ನೇಶ್, ಅನನ್ಯಾ ಭಟ್, ಮಂಗಲಿ, ಜಸ್ಕರನ್ ಸಿಂಗ್, ಐಶ್ವರ್ಯ ರಂಗರಾಜನ್, ಸಿ.ಆರ್. ಬಾಬಿ, ಹರ್ಷಿಕಾ ದೇವನಾಥ್, ಅನಿರುದ್ಧ ಶಾಸ್ತ್ರಿ, ಇಂದೂ ನಾಗರಾಜ್, ಶೇಷಾಂಕ್ ಶೇಷರಿಗಿ ಅವರು ವಿವಿಧ ಗೀತೆಗಳನ್ನು ಹಾಡುವ ಮೂಲಕ ರಂಜಿಸಲಿದ್ದಾರೆ.

ಅ.14ರಂದು ಭಾರತದ ಹೆಸರಾಂತ ಸಂಗೀತ ನಿರ್ದೇಶಕ ಮತ್ತು ಗಾಯಕರಾದ ಶಂಕರ್-ಎಹಸಾನ್-ಲಾಯ್ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಅ.15ರಂದು ಸುಪ್ರಸಿದ್ಧ ಬಹುಭಾ ಗಾಯಕ ಸಿಡ್ ಶ್ರೀರಾಮ್ ಅವರು ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ.

ಅ.16ರಂದು ಸ್ಯಾಂಡಲ್‌ವುಡ್ ನೈಟ್ಸ್ ನಡೆಯಲಿದ್ದು, ಕನ್ನಡದ ಸಿನಿತಾರೆಯಾದ ಶಿವರಾಜ್ ಕುಮಾರ್, ರಚಿತಾ ರಾಮ್, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಚಂದನ್ ಶೆಟ್ಟಿ, ಅನುರಾಧಾ ಭಟ್, ಹೆಸರಾಂತ ಗಾಯಕರು ಕಾರ್ಯಕ್ರಮ ನೀಡಲಿದ್ದಾರೆ.

ಅ.17ರಂದು ಭಾರತದ ಪ್ರಖ್ಯಾತ ಗಾಯಕರಾದ ಜಾಸ್ಮಿನ್ ಸ್ಯಾಂಡ್ಲಾಸ್ ಅವರಿಂದ ರಸ ಸಂಜೆ ಕಾರ್ಯಕ್ರಮ ನಡೆಯಲಿದೆ.

ಆಹ್ವಾನ ಪತ್ರಿಕೆಯೊಂದಿಗೆ ಚಾಮುಂಡೇಶ್ವರಿಗೆ ಪೂಜೆ

ಮೈಸೂರು: ಮೈಸೂರು ದಸರಾ 2026ರ ಆಹ್ವಾನ ಪತ್ರಿಕೆ ಸಿದ್ಧಗೊಂಡಿದ್ದು, ಜಿಲ್ಲಾಡಳಿತ ವತಿಯಿಂದ ಸೋಮವಾರ ಚಾಮುಂಡಿ ಬೆಟ್ಟದಲ್ಲಿ ದಸರಾ ಕಾರ್ಯಕ್ರಮಗಳು ಉತ್ತಮವಾಗಿ ಮೂಡಿಬರಲಿ ಎಂದು ಆಹ್ವಾನ ಪತ್ರಿಕೆಯೊಂದಿಗೆ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಳ್ಳಲಾಯಿತು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.