ಮೈಸೂರು: ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಸಲೀಂ ಅಧ್ಯಕ್ಷತೆಯಲ್ಲಿ ಬುಧವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸಭೆ ಆಯೋಜಿಸಲಾಗಿತ್ತು.
ದಸರಾ ಮಹೋತ್ಸವದ ಸಂದರ್ಭ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಹಿರಿಯ ಪೊಲೀಸ್
ಅಧಿಕಾರಿಗಳಿಂದ ಡಾ. ಸಲೀಂ ಮಾಹಿತಿ ಪಡೆದುಕೊಂಡರು. ಅರಮನೆ, ಜಂಬೂಸವಾರಿ ಮಾರ್ಗ, ಪ್ರಮುಖ ಪ್ರವಾಸಿ ತಾಣಗಳು, ಜನದಟ್ಟಣೆ ಪ್ರದೇಶಗಳು ಹಾಗೂ ವಿವಿಧ ದಸರಾ ಕಾರ್ಯಕ್ರಮಗಳ ವೇಳೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಸುರಕ್ಷತೆಗೆ ಆದ್ಯತೆ :
ಸಭೆಯ ಬಳಿಕ ಮಾತನಾಡಿದ ಡಾ. ಸಲೀಂ, ದಸರಾ ಬಂದೋಬಸ್ತ್ ಕುರಿತು ಸಂಪೂರ್ಣ ರೂಪುರೇಷೆ ಬಗ್ಗೆ ಚರ್ಚಿಸಲಾಗಿದೆ. ದಸರಾ ಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಪ್ರವಾಸಿಗರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು. ಜನದಟ್ಟಣೆ ನಿರ್ವಹಣೆ, ಸಂಚಾರ ನಿಯಂತ್ರಣ, ಪ್ರಮುಖ ಸ್ಥಳಗಳ ಭದ್ರತೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸ್ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಕಳೆದ ವರ್ಷ ದಸರಾ ಮಹೋತ್ಸವದ ಭದ್ರತೆಗಾಗಿ 6 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿ ಅಗತ್ಯವಿದೆ. ಅದಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಬಾರಿ ಎಷ್ಟು ಸಿಬ್ಬಂದಿ ನಿಯೋಜಿಸಬೇಕು, ಎಲ್ಲೆಲ್ಲಿ ಹೆಚ್ಚುವರಿ ಭದ್ರತೆ ಕಲ್ಪಿಸಬೇಕು, ಅಂತಿಮ ರೂಪುರೇಷೆ ಹೇಗಿರಬೇಕು ಎಂಬಿತ್ಯಾದಿ ಕುರಿತು ಮುಂದಿನ ಹಂತದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.