ಮೈಸೂರು: ವಿಶಾಲ ಬ್ರಹ್ಮಾಂಡದ ಕೌತುಕ ವೀಕ್ಷಣೆಗೆ ವೇದಿಕೆಯಾಗಿರುವ ‘ಕಾಸ್ಮೋಸ್ ತಾರಾಲಯ’ವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಜೆ ದೇಶಕ್ಕೆ ಸಮರ್ಪಣೆ ಮಾಡಿದರು. ಇದು ದೇಶದ ಮೊದಲ ಎಲ್ಇಡಿ ಬಾಗಿದ ಗುಮ್ಮಟ ತಾರಾಲಯ ಎಂಬ ಹಿರಿಮೆ ಪಾತ್ರವಾಗಿದೆ.
ನಗರದ ಹಚ್ಚಹಸಿರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ 3 ಎಕರೆಯಲ್ಲಿ 115 ಕೋಟಿ ರೂ.ವೆಚ್ಚದಲ್ಲಿ ತಲೆಯೆತ್ತಿರುವ ಈ ತಾರಾಲಯ ಖಗೋಳ ಸಂಶೋಧನಾ ಲೋಕದಲ್ಲೇ ವಿಶಿಷ್ಟ. ಭಾರತೀಯ ಖಗೋಳ ಭೌತವಿಜ್ಞಾನ ವತಿಯಿಂದ ಸ್ಥಾಪನೆಗೊಂಡಿರುವ ಇದು ಎಲ್ಇಡಿ ಡೋಮ್ ಹೊಂದಿರುವ ಆಧುನಿಕ ಡಿಜಿಟಲ್ ಪ್ಲಾನೆಟೋರಿಯಂ ಹಿರಿಮೆಗೂ ಸಾಕ್ಷಿಯಾಗಿದೆ.
* ಈ ಹಿಂದಿನ ಎಲ್ಲ ವ್ಯವಸ್ಥೆಗಳಲ್ಲಿ ಪ್ರೊಜೆಕ್ಷನ್ ವ್ಯವಸ್ಥೆ ಅಳವಡಿಸಿದರೆ ಇಲ್ಲಿ ಗುಮ್ಮಟದ ಒಳಭಾಗದಲ್ಲಿ ನೇರವಾಗಿ ಬೆಳಕು ಹೊರಸೂಸುವ ಎಲ್ಇಡಿ ಪ್ಯಾನಲ್ಗಳ ದಟ್ಟ ಜೋಡಣೆ ಅಳವಡಿಸಲಾಗಿದೆ
* ಎಲ್ಇಡಿ ಡೋಮ್ ಆಧುನಿಕ ಡಿಜಿಟಲ್ ತಾರಾಲಯ
* 42 ಮೆಗಾಪಿಕ್ಸೆಲ್ನ 8ಕೆ ಗುಮ್ಮಟ
* ಅತ್ಯಾಧುನಿಕ ಕಂಪ್ಯೂಟರ್ ವ್ಯವಸ್ಥೆಯ ನೆರವಿನಿಂದ ಅತಿ ಹೆಚ್ಚಿನ ರೆಸಲ್ಯೂಷನ್ ಹಾಗೂ ಪ್ರಕಾಶಮಾನವಾದ ದೃಶ್ಯ ಮೂಡಿಸಲಾಗುತ್ತದೆ
* 15 ಮೀಟರ್ ವ್ಯಾಸದ ಸ್ಕೈ ಥಿಯೇಟರ್ನಲ್ಲಿ 160 ಆಸನಗಳ ವ್ಯವಸ್ಥೆ
* ಸಂಪೂರ್ಣ ತಲ್ಲೀನಗೊಳಿಸುವ ಅನುಭವವನ್ನು ಒದಗಿಸಲು ಎಲ್ಇಡಿ ಡೋಮ್ ಅನ್ನು 15 ಡಿಗ್ರಿ ಓರೆಯಾಗಿ ಅಳವಡಿಕೆ
* ಈ ವ್ಯವಸ್ಥೆಯು 353.4 ಚದರ ಮೀಟರ್ ವಿಸ್ತೀರ್ಣದ ಪ್ರದರ್ಶನ ಮೇಲ್ಮಯಲ್ಲಿ 42 ಮೆಗಾಪಿಕ್ಸೆಲ್ಗಳ ರೆಸುಲ್ಯೂಷನ್ನಲ್ಲಿ ದೃಶ್ಯ ಪ್ರದರ್ಶನ. ಇದು ಪ್ರಮಾಣಿತ ಟೂ 8ಕೆ ರೆಸುಲ್ಯೂಷನ್ಗಿಂತಲೂ ಹೆಚ್ಚಿನ ಸಾಮರ್ಥ್ಯ ಹೊಂದಿದೆ.
* ಡೋಮ್ನ ಸಂಪೂರ್ಣ ಬಾಗಿದ ಮೇಲ್ಮಯಲ್ಲಿ ಯಾವುದೇ ಅಡಚಣೆ ಇಲ್ಲದೇ ಚಲನಚಿತ್ರದಂತೆ ನಿರಂತರವಾಗಿ ದೃಶ್ಯ ಪ್ರದರ್ಶಿಸಲು ಸಾಧ್ಯವಾಗುತ್ತದೆ
* 14 ಜಿಪಿಯುಗಳನ್ನು ಹೊಂದಿರುವ ಉನ್ನತ ಸಾಮರ್ಥ್ಯದ ಗಣಕ ವ್ಯವಸ್ಥೆಯ ಅತ್ಯಾಧುನಿಕ ಸ್ಕೈ ಎಕ್ಸ್ಪ್ಲೋರರ್ ತಂತ್ರಾಂಶದ ನೆರವಿನೊಂದಿಗೆ ಅದ್ಭುತ ದೃಶ್ಯಾನುಭವ ಕಲ್ಪಿಸುತ್ತದೆ
* ಹಾನ್ಲೆಯಂತಹ ದೂರದ ಸ್ಥಳಗಳೊಂದಿಗೆ ಸಂಪರ್ಕ ಸಾಧಿಸುವ ಸಾಮರ್ಥ್ಯವನ್ನೂ ಕಾಸ್ಕೋಸ್-ಮೈಸೂರು ಹೊಂದಿದೆ. ಇದರಿಂದ ನೈಜ ರಾತ್ರಿ ಆಕಾಶದ ಅನುಭವವನ್ನು ಸಂದರ್ಶಕರಿಗೆ ಕಲ್ಪಿಸುತ್ತದೆ.
* ಈ ವ್ಯವಸ್ಥೆಯನ್ನು ಖಗೋಳ ಶಿಕ್ಷಣದೊಂದಿಗೆ ತಲ್ಲೀನಗೊಳಿಸುವ ಮನರಂಜನೆ, ದತ್ತಾಂಶಗಳ ದೃಶ್ಯಕರಣ ಹಾಗೂ ವಿಜ್ಞಾನದ ವಿವಿಧ ಕ್ಷೇತ್ರಗಳ ಶಿಕ್ಷಣಕ್ಕೂ ಬಳಸಬಹುದಾಗಿದೆ.