ಅರಮನೆಯ ಗೋಡೆಗೆ ಬಣ್ಣ ಬಳಿಯುತ್ತಿರುವ ಕಾರ್ಮಿಕ. Dasara preparations gather pace at Mysore Palace.
ಮೈಸೂರು

ಮೈಸೂರು ಅರಮನೆಯಲ್ಲಿ ದಸರಾ ಸಿದ್ಧತೆ ಚುರುಕು

ಒಳ, ಹೊರಾವರಣದಲ್ಲಿ ಅಗತ್ಯ ತಯಾರಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲೂ ಸಿದ್ಧತೆ ಚುರುಕುಗೊಂಡಿದೆ.

ಈ ಮಹಲ್‌ನ ಒಳಾವರಣ ಹಾಗೂ ಹೊರಗೆ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಇದು ಮಾಸಾಂತ್ಯದ ಹೊತ್ತಿಗೆ ಪೂರ್ಣಗೊಳ್ಳಲಿದೆ.

ಪ್ರಸಕ್ತ ಸಾಲಿನ ದಸರಾ ಮಹೋತ್ಸವ ಅ.11ರಂದು ಆರಂಭವಾಗಲಿದ್ದು, ಅ.21ರಂದು ವಿಜಯದಶಮಿ ದಿನ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಅ.11ರಿಂದಲೇ ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳು ಶುರುವಾಗಲಿವೆ.

ಈ ಹಿನ್ನೆಲೆಯಲ್ಲಿ ಅ.5ರಂದು ಅರಮನೆ ಒಳಭಾಗದಲ್ಲಿರುವ ಸುಂದರ ದರ್ಬಾರ್ ಹಾಲ್‌ನಲ್ಲಿ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿ ಬೆಳ್ಳಿ ಭದ್ರಾಸನವನ್ನು ಜೋಡಣೆ ಮಾಡಲಾಗುತ್ತದೆ. ಅದಕ್ಕಾಗಿ ಅರಮನೆ ಒಳಾವರಣದಲ್ಲಿ ಸಿದ್ಧತಾ ಕಾರ್ಯ ಆರಂಭಿಸಲಾಗಿದೆ.

ಅರಮನೆಯ ಖಾಸಗಿ ದರ್ಬಾರ್ ಹಾಲ್‌ನೊಂದಿಗೆ ಕನ್ನಡಿತೊಟ್ಟಿ, ಕಲ್ಯಾಣ ಮಂಟಪ ಸೇರಿದಂತೆ ವಿವಿಧೆಡೆ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ಅಲ್ಲದೆ ಅರಮನೆಯೊಳಗೆ ನೆಲಹಾಸನ್ನು ನೀರಿನಿಂದ ಸ್ವಚ್ಛಗೊಳಿಸಲಾಗುತ್ತಿದೆ. ಅರಮನೆಯೊಳಗೆ ಅಳವಡಿಸಿರುವ ಅಲಂಕಾರಿಕ ವಿದ್ಯುತ್ ದೀಪಗಳ ಗುಚ್ಛವನ್ನು ಸ್ವಚ್ಛಗೊಳಿಸಿ, ಅವುಗಳಲ್ಲಿ ಕೆಟ್ಟಿರುವ ಬಲ್ಬ್‌ಗಳನ್ನು ಬದಲಾಯಿಸಲಾಗುತ್ತಿದೆ. ಇದರೊಂದಿಗೆ ದುರಸ್ತಿ ಕೆಲಸವೂ ನಡೆದಿದೆ.

ಸಿಂಹಾಸನ ಜೋಡಣೆಗೂ ಮುನ್ನ ಅರಮನೆ ಒಳಾವರಣದಲ್ಲಿ ಎಲ್ಲ ತಯಾರಿ ಕೆಲಸವೂ ಪೂರ್ಣಗೊಳಿಸಲಾಗುತ್ತದೆ. ದರ್ಬಾರ್ ಹಾಲ್‌ನಲ್ಲಿ ಕಬ್ಬಿಣದ ಪೈಪ್‌ಗಳಿಂದ ಸ್ಟಾಂಡ್ ನಿರ್ಮಿಸಿಕೊಂಡು ದುರಸ್ತಿ ಕಾರ್ಯ ಮಾಡಲಾಗುತ್ತಿದೆ.

ದಸರಾ ವೀಕ್ಷಣೆಗೆ ಅರಮನೆ ಬರುವ ಗಣ್ಯರು ಹಾಗೂ ಪ್ರವಾಸಿಗರನ್ನು ಆಕರ್ಷಿಸಲು ಅರಮನೆ ಮಂಡಳಿಯ ತೋಟಗಾರಿಕಾ ವಿಭಾಗದಿಂದ ಹೂವಿನ ಅಲಂಕಾರಕ್ಕೆ ತಯಾರಿ ನಡೆದಿದೆ.

ಅರಮನೆ ಮುಂಭಾಗದ ಹಾಗೂ ಎರಡೂ ಬದಿಯಲ್ಲಿರುವ ಉದ್ಯಾನದಲ್ಲಿ ವಿವಿಧ ವಿನ್ಯಾಸದಲ್ಲಿ ಜೋಡಣೆ ಮಾಡಲು 20 ಸಾವಿರ ಕುಂಡಗಳಲ್ಲಿ ವಿವಿಧ ಬಣ್ಣದ ಹೂವಿನ ಗಿಡ ಬೆಳೆಸಲಾಗಿದೆ. ಜಯಮಾರ್ತಾಂಡ ದ್ವಾರದ ಮುಂಭಾಗ ಇರುವ ಉದ್ಯಾನದಲ್ಲಿ ಆನೆ ಮಾದರಿಯಲ್ಲಿ ಗಿಡಗಳಿಂದ ಆಕೃತಿಗಳನ್ನು ನಿರ್ಮಿಸಲಾಗಿದೆ. ಕೋಟೆ ಆಂಜನೇಯಸ್ವಾಮಿ ದೇವಾಲಯದ ಪಕ್ಕ ಕ್ರೋಟ್ ಗಿಡಗಳಿಂದ ‘ದಸರಾ ಮಹೋತ್ಸವ-2026’ ಎಂದು ಬೆಳೆಸಲಾಗುತ್ತಿದೆ. ಉದ್ಯಾನವನದಲ್ಲಿರುವ ವಿದ್ಯುತ್ ದೀಪಗಳ ದುರಸ್ತಿ ಕಾರ್ಯ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.