ಯದುವೀರ್ Executive abuse to take over Mysore Palace: MP Yaduveer complains
ಮೈಸೂರು

ಮೈಸೂರು ಅರಮನೆ ಸ್ವಾಧೀನಕ್ಕೆ ಕಾರ್ಯಾಂಗ ದುರ್ಬಳಕೆ: ಸಂಸದ ಯದುವೀರ್ ದೂರು

ಕೋರ್ಟ್ ತೀರ್ಮಾನವೇ ಅಂತಿಮ ಈ ಚರ್ಚೆಯೇ ಅಪ್ರಸ್ತುತ.

ಮೈಸೂರು: ಮೈಸೂರು ಅರಮನೆಯ ಆಸ್ತಿ ಸ್ವಾಧೀನಕ್ಕಾಗಿ ಕಾರ್ಯಾಂಗವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜವಂಶಸ್ಥರೂ ಆಗಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದೂರಿದರು.

ರಾಜವಂಶಸ್ಥರಿಗೆ ಸೇರಿದ ಆಸ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಕಾರ್ಯಾಂಗದೊಂದಿಗೆ ಶಾಸಕಾಂಗವೂ ಕೈಜೋಡಿಸಿದೆ. ಆಸ್ತಿ ಸ್ವಾಧೀನಕ್ಕಾಗಿ ಜಾರಿಗೆ ತಂದಿರುವ 1996, 1998ರ ಕಾಯ್ದೆ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವೇ ಈ ಕುರಿತು ಅಂತಿಮ ತೀರ್ಮಾನ ಮಾಡುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಅರಮನೆ ಒಡೆತನದ ವಿಚಾರದ ಕುರಿತು ಈಗಾಗಲೇ ನಮ್ಮ ತಾಯಿ ಪ್ರಮೋದಾದೇವಿ ಒಡೆಯರ್ ಮಾತನಾಡಿದ್ದಾರೆ. ಈ ಚರ್ಚೆಯೇ ಅಪ್ರಸ್ತುತ. ಇದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ. ಕಾನೂನಾತ್ಮಕವಾಗಿಯೇ ಎಲ್ಲವೂ ಬಗೆಹರಿಯಲಿದೆ ಎಂದು ತಿಳಿಸಿದರು.

ಇಂತಹ ವಿಚಾರದಲ್ಲಿ ರಾಜಕಾರಣ ಮಾಡುವುದು ದುರ್ದೈವ. ಆಸ್ತಿ ಯಾರದು ಎಂದು ತೀರ್ಮಾನ ನಡೆಯುವುದು ಕೋರ್ಟ್‌ನಲ್ಲಿ. ಆಸ್ತಿ ನಮ್ಮದೋ, ಅಲ್ಲವೋ ಎಂಬ ಚರ್ಚೆಯೂ ಅಗತ್ಯವೇ ಇಲ್ಲ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯವೇ ಅಂತಿಮ. ನಮ್ಮ ಆಸ್ತಿ ತೆಗೆದುಕೊಳ್ಳಲು ನಾವು ಹೋರಾಟ ಮಾಡಬೇಕಾಗಿದೆ ಎಂದರು.

ಈ ಬಾರಿಯ ದಸರಾದಲ್ಲಿ ಆಗಿರುವ ಕೆಲ ಲೋಪಗಳನ್ನು ಮುಂದಿನ ದಸರಾದಲ್ಲಿ ಸರಿಪಡಿಸಿಕೊಳ್ಳುವ ಅಗತ್ಯವಿದೆ. ದಸರಾ ಮುಗಿದ ಬಳಿಕ ಅದರ ಲೋಪಗಳ ಬಗ್ಗೆ ಚರ್ಚೆ ಮುಂದುವರಿಸುವ ಅಗತ್ಯವಿಲ್ಲ. ಅರಮನೆ ಆವರಣದ ಭದ್ರತೆಯನ್ನು ಹೊರಗಿನವರಿಗೆ ವಹಿಸಿದ್ದರಿಂದ ಜಟ್ಟಿ ಕಾಳಗಕ್ಕೆ ಅಡಚಣೆ ಆಗಿದೆ ಎಂದು ಹೇಳಿದರು.

ಲೋಪ ಸರಿಪಡಿಸಿಕೊಳ್ಳೋಣ:

ಹಿಂದಿನ ದಸರಾದಲ್ಲೂ ಕೂಡ ಲೋಪಗಳಿದ್ದವು. ಈ ಬಾರಿ ಆಹಾರ ಮೇಳ, ದೀಪಾಲಂಕಾರ ಸೇರಿ ಹಲವೆಡೆ ಲೋಪವಾಗಿದೆ. ಮುಂದಿನ ವರ್ಷಕ್ಕೆ ಇದನ್ನು ಸರಿಪಡಿಸಿಕೊಂಡು ಹೋಗಬೇಕಿದೆ. ಕಳೆದ ವರ್ಷ ನಮ್ಮನ್ನೇ ಒಳಗೆ ಬಿಟ್ಟಿರಲಿಲ್ಲ. ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಸಲಹೆ ನೀಡಲಾಗುವುದು ಎಂದರು.

ಆರೋಪ ಎದುರಿಸಲು ಸಿದ್ಧ:

ಅಗತ್ಯ ವಸ್ತುಗಳ ಬೆಲೆ ಏರಿದೆ. ಅದನ್ನು ಮರೆಮಾಚುವ ಸಲುವಾಗಿ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಪ್ರಮಾಣದ ವಿಚಾರ ಪ್ರಸ್ತಾಪ ಮಾಡಲಾಗಿದೆ. ಸುಳ್ಳು ಆರೋಪಗಳನ್ನು ತಂದು ಇದನ್ನು ಮುಚ್ಚಿಹಾಕಲಾಗುತ್ತಿದೆ. ಪ್ರಯೋಗಾಲಯದ ವರದಿ ನೀಡಿ ಆರೋಪ ಮಾಡಲಿ. ನಾವು ಆರೋಪ ಎದುರಿಸಲು ಸಿದ್ಧ. ಆದರೆ, ಪ್ರತಿಪಕ್ಷಗಳ ಯಾವ ಆರೋಪಗಳೂ ಈ ವರೆಗೂ ಸಾಬೀತಾಗಿಲ್ಲ ಎಂದು ಸಂಸದ ಯದುವೀರ್ ಹೇಳಿದರು. ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ ಇನ್ನಿತರರಿದ್ದರು.