ಮೈಸೂರು: ಕೇಂದ್ರ ಸರ್ಕಾರವು ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿ ಮಾಡಿಸಬೇಕು. ರಾಜ್ಯ ಸರ್ಕಾರವು ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್ಆರ್ಪಿ) ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು.
ನಗರದ ಗನ್ಹೌಸ್ ಎದುರಿನ ಕುವೆಂಪು ಉದ್ಯಾನದ ಬಳಿಕ ಜಮಾವಣೆಗೊಂಡ ಪ್ರತಿಭಟನಾಕಾರರು, ವಿವಿಧ ಘೋಷಣೆ ಕೂಗಿ, ವಾಹನಗಳ ಸಂಚಾರವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿರುವ ಅಂದಾಜು ಆರು ಕೋಟಿ ಕಬ್ಬು ಬೆಳೆಗಾರರು ಅರ್ಥವ್ಯವಸ್ಥೆಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು.
ರಾಜ್ಯ ಸರ್ಕಾರಕ್ಕೆ ಸುಮಾರು 50 ಸಾವಿರ ಕೋಟಿ ರೂ. ಆದಾಯ ಕಬ್ಬು ಬೆಳೆಗಾರರಿಂದ ದೊರೆಯುತ್ತಿದೆ. ಆದಕಾರಣ ತಮಿಳುನಾಡಿನಲ್ಲಿ ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ 700 ರೂ., ಗುಜರಾತಿನಲ್ಲಿ 800 ರೂ., ಉತ್ತರಪ್ರದೇಶದಲ್ಲಿ 650 ರೂ. ನೀಡಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿ ಪ್ರಸಕ್ತ ಸಾಲಿಗೆ ಪ್ರತಿ ಟನ್ ಕಬ್ಬಿಗೆ 1000 ರೂ. ಹೆಚ್ಚುವರಿ ಎಫ್ಆರ್ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರನ್ನು ಕರೆಯಿಸಿ ಚರ್ಚೆ ಮಾಡಿದ ಮುಖ್ಯಮಂತ್ರಿ, ಎರಡು ದಿನದ ಕಾಲಾವಕಾಶ ಪಡೆದು ಬೆಲೆ ನಿಗದಿ ಕುರಿತು ತೀರ್ಮಾನ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಬ್ಬು ಬೆಳೆಗಾರರೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆ ಮಾರಾಟವನ್ನು ಸ್ಥಗಿತಗೊಳಿಸುವ ಆದೇಶವನ್ನು ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರವು ಸಕ್ಕರೆಯ ಎಂಎಸ್ಪಿ ದರವನ್ನು 6,000 ರೂ. ನಿಗದಿಗೊಳಿಸಬೇಕು. ಕಬ್ಬಿನ ಇಳುವರಿ ಮಾನದಂಡವನ್ನು 9.25ಗೆ ನಿಗದಿ ಪಡಿಸಬೇಕು. ವಾಣಿಜ್ಯ ಉದ್ದೇಶಕ್ಕೆ ಬಳಕೆ ಆಗುವ ಸಕ್ಕರೆ ದರ ಏರಿಕೆ ಮಾಡಬೇಕು. ಸಕ್ಕರೆ ಕಾರ್ಖಾನೆಗಳಿಂದ ಉತ್ಪಾದನೆಯಾಗುವ ಎಥನಾಲ್ ಅನ್ನು ಬೇರೆ ರಾಜ್ಯಗಳ ರೀತಿ ರಾಜ್ಯದಲ್ಲೂ ಖರೀದಿ ಮಾಡಬೇಕು. ಎಥನಾಲ್ ಉತ್ಪಾದನೆಗೆ ರೈತರಿಗೂ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕಬ್ಬಿನ ಕಟಾವು, ಸಾಗಣೆ, ಕಾರ್ಮಿಕರ ಕೂಲಿಯನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಭರಿಸಬೇಕು. ಉತ್ತರ ಮತ್ತು ದಕ್ಷಿಣ ಎಂಬ ನಿಯಮವನ್ನು ಕೈ ಬಿಟ್ಟು ರಾಜ್ಯಾದ್ಯಂತ ಇಳುವರಿ ಆಧಾರದ ಮೇಲೆ ದರ ನಿಗದಿ ಮಾಡಬೇಕು. ಕಾರ್ಖಾನೆ ಮತ್ತು ರೈತರ ನಡುವಿನ ಒಪ್ಪಂದ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
15 ತಿಂಗಳಾದರೂ ಕಬ್ಬನ್ನು ಕಟಾವು ಮಾಡದೆ ರೈತರಿಗೆ ಇಳುವರಿಯಲ್ಲಿ ಹಾಗೂ ಬ್ಯಾಂಕ್ ಸಾಲ ತೀರಿಸುವಲ್ಲಿ ತೊಂದರೆಯಾಗುತ್ತಿದೆ. ಆದ್ದರಿಂದ ಒಪ್ಪಂದ ಪತ್ರದ ಈ ರೀತಿಯ ವಿಳಂಬಕ್ಕೆ ಹೆಚ್ಚುವರಿ ಬಡ್ಡಿ ಸೇರಿಸಿಕೊಳ್ಳಲು ಸರ್ಕಾರವು ಆದೇಶ ಮಾಡಬೇಕು.
ರಾಜ್ಯ ಮತ್ತು ಕೇಂದ್ರ ಸರ್ಕಾರವು ಕಬ್ಬಿನ ಬಾಕಿ ಅಥವಾ ಲಾಭಾಂಶ ಹಂಚಿಕೆಯ ಹಣವನ್ನು ಪಾವತಿ ಮಾಡದ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕಬ್ಬು ಖರೀದಿ ಮಾಡಿದ 14 ದಿನದ ಒಳಗೆ ರೈತರಿಗೆ ಹಣ ನೀಡಬೇಕು. ಎಲ್ಲ ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರದಿಂದಲೇ ತೂಕದ ಯಂತ್ರ ಅಳವಡಿಸಬೇಕು. ಇಳುವರಿ ಮೋಸ ತಪ್ಪಿಸಲು ಸ್ಥಳೀಯ ತಜ್ಞರ ಸಮಿತಿ ನೇಮಿಸಬೇಕು. ಕಾರ್ಖಾನೆ ಮುಂದೆ ಲ್ಯಾಬ್ ಸ್ಥಾಪಿಸಬೇಕು. ಹೊಸ ಕಾರ್ಖಾನೆ ಆರಂಭ ಮತ್ತು ಕಬ್ಬು ಮೀಸಲು ಪ್ರದೇಶದ ನಿಯಮ ಕೈಬಿಡಬೇಕು. ಕಬ್ಬಿಗೂ ಬೆಳೆ ವಿಮೆ ವಿಸ್ತರಿಸಬೇಕು. ಕಬ್ಬು ಬೆಳೆಗಾರರು ಜೀವನ ರಕ್ಷಣೆಗಾಗಿ ಪ್ರತ್ಯೇಕ ವಿಮಾ ಯೋಜನೆ ಜಾರಿಗೆ ತರಬೇಕು ಎಂದೂ ಒತ್ತಾಯಿಸಿದರು.
ಕೆರೆಹುಂಡಿ ರಾಜಣ್ಣ, ಪ್ರಕಾಶ್ ಗಾಂಧಿ, ಹಾಲಿನ ನಾಗರಾಜ್, ಮಾಲಿಯೂರು ಮಹೇಂದ್ರ, ಮುದ್ದಾಳಿ ಮಧು, ಗೌಡಿಕೆ ಶಿವಣ್ಣ, ಜೆಸಿಬಿ ಚಿದಂಬರ, ಅಂಡುವಿನಹಳ್ಳಿ ಜಗದೀಶ್, ಮಹೇಶ್, ದೇವಿರಮ್ಮನಹಳ್ಳಿ ಪ್ರಭು, ಜಗದೀಶ್, ರಾಮಣ್ಣ. ಶಾನಂಡಳ್ಳಿ ಬಸವರಾಜಪ್ಪ, ಗುರುಪುರ ಚಂದ್ರಪ್ಪ, ಪುಟ್ಟ ಮಲ್ಲೇಗೌಡ ಇನ್ನಿತರರಿದ್ದರು.