ಅಮೃತಾನಂದಮಯಿ ದೇವಿ Amritanandamayi to visit Mysuru on Nov 2
ಮೈಸೂರು

ಮೈಸೂರಿಗೆ ನ.2ರಂದು ಅಮೃತಾನಂದಮಯಿ ಭೇಟಿ

ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ಆಯೋಜನೆ

ಮೈಸೂರು: ಆಧ್ಯಾತ್ಮಿಕ ಗುರು ಮಾತಾ ಅಮೃತಾನಂದಮಯಿ ದೇವಿ ಅವರು ನ.2 ಮತ್ತು 3ರಂದು ನಗರದ ಬೋಗಾದಿ 2ನೇ ಹಂತದಲ್ಲಿರುವ ಮಾತಾ ಅಮೃತಾನಂದಮಯಿ ಮಠಕ್ಕೆ ಭೇಟಿ ನೀಡಲಿದ್ದಾರೆ.

ಏಳು ವರ್ಷಗಳ ಬಳಿಕ ನಡೆಯುತ್ತಿರುವ ಈ ಭೇಟಿ ಸಂದರ್ಭದಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮ, ಭಜನೆ, ಸತ್ಸಂಗ, ಹಲವಾರು ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

2000ರಲ್ಲಿ ಪ್ರತಿಷ್ಠಾಪನೆಗೊಂಡ ಬ್ರಹ್ಮಸ್ಥಾನಂ ದೇವಸ್ಥಾನದ 26ನೇ ವಾರ್ಷಿಕೋತ್ಸವದ ನೇತೃತ್ವ ವಹಿಸಲಿದ್ದಾರೆ. ಮಠದ ಸದಸ್ಯರು ಪೂರ್ಣಕುಂಭದೊಂದಿಗೆ ಸಾಂಪ್ರದಾಯಿಕವಾಗಿ ಅಮ್ಮನವರನ್ನು ಸ್ವಾಗತಿಸಲಿದ್ದಾರೆ.

ಸಂಸದರಾದ ಡಾ. ಸಿ. ಎನ್. ಮಂಜುನಾಥ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ, ಕ್ಸೇವಿಯರ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಪಿ. ಕೆ. ಪ್ರಲ್ಹಾದ್, ಕೊಚ್ಚಿಯ ಅಮೃತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಪಿ. ಗಿರೀಶ್ ಕುಮಾರ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿರುವ 50 ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿವೇತನ, 1,000ಕ್ಕೂ ಹೆಚ್ಚು ಅಮೃತಶ್ರೀ (ಸ್ವಾವಲಂಬಿ ಉದ್ಯೋಗ ಮತ್ತು ಸಬಲೀಕರಣ) ಸದಸ್ಯರಿಗೆ ಸೀರೆ ವಿತರಿಸಲಾಗುವುದು. ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯಗಳಿಗೂ ಆರ್ಥಿಕ ನೆರವು ನೀಡಲಾಗುವುದು.

ಎರಡೂ ದಿನಗಳಂದು ಅಮ್ಮನ ಸತ್ಸಂಗ, ಭಜನೆ, ಧ್ಯಾನ, ಆರತಿ, ದರ್ಶನ ನಡೆಯಲಿವೆ. ಈ ಮೂಲಕ ಭಕ್ತರು ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ. ಬ್ರಹ್ಮಸ್ಥಾನಂ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಗುವುದು.

ಅಮ್ಮನವರನ್ನು ಸ್ವಾಗತಿಸಲು ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ವಿಶಾಲವಾದ ಪೆಂಡಾಲ್ ನಿರ್ಮಾಣ, ಇತರ ಮೂಲ ಸೌಕರ್ಯಗಳ ವ್ಯವಸ್ಥೆ ಬಹುತೇಕ ಪೂರ್ಣಗೊಂಡಿದೆ. ಅಮ್ಮನವರ ಭೇಟಿಯ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಯುತ್ತಿವೆ. ಉತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಆಹಾರ, ಕುಡಿಯುವ ನೀರು, ಇನ್ನಿತರ ಮೂಲ ಸೌಕರ್ಯ ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಮೈಸೂರಿನ ಕಾರ್ಯಕ್ರಮ ಬಳಿಕ ಅಮ್ಮ ಬೆಂಗಳೂರಿನ ಬ್ರಹ್ಮಸ್ಥಾನಂ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ತೆರಳಲಿದ್ದಾರೆ ಎಂದು ಆಯೋಜನಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ