ಎಚ್.ಡಿ.ಕೋಟೆ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ಚಾಲಕರು ಮತ್ತು ನಿರ್ವಾಹಕರಿಗಾಗಿ ಆಯೋಜಿಸಿದ್ದ ಇಂಧನ ಉಳಿತಾಯ ಹಾಗೂ ಸುರಕ್ಷಿತ ಚಾಲನಾ ತರಬೇತಿ ಕಾರ್ಯಕ್ರಮದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್ ತ್ಯಾಪಿ ಮಾತನಾಡಿದರು. ಕನ್ನಡ ಪ್ರಮೋದ್, ರಾಜೇಂದ್ರ, ತ್ಯಾಗರಾಜ್, ಅಗ್ನಿಶಾಮಕ ದಳದ ಅಶೋಕ್ ಇತರರು ಇದ್ದರು. 
ಮೈಸೂರು

ಮೈ-ಬೆಂ ಹೈವೇಯಲ್ಲಿ ಹೆಚ್ಚಿದ ಬಸ್ ಅಪಘಾತ

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್ ತ್ಯಾಪಿ ಕಳವಳ

ಎಚ್.ಡಿ.ಕೋಟೆ : ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳ ಅಪಘಾತ ಪ್ರಕರಣ ಹೆಚ್ಚಾಗಿವೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್ ತ್ಯಾಪಿ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ಡಿಪೋದಲ್ಲಿ ಗುರುವಾರ ಚಾಲಕರು ಮತ್ತು ನಿರ್ವಾಹಕರಿಗಾಗಿ ಆಯೋಜಿಸಿದ್ದ ಇಂಧನ ಉಳಿತಾಯ ಹಾಗೂ ಸುರಕ್ಷಿತ ಚಾಲನಾ ತರಬೇತಿಯಲ್ಲಿ ಮಾತನಾಡಿದರು.

ಮೈಸೂರು ಮುಖ್ಯರಸ್ತೆಯಲ್ಲಿ ಸಂಚರಿಸುವ ಬಸ್‌ಗಳು ಹಾಗೂ ಇತರ ವಾಹನಗಳ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿಶೇಷವಾಗಿ ಕೆಲವು ನಿರ್ದಿಷ್ಟ ಸ್ಥಳಗಳು ಅಪಘಾತ ವಲಯಗಳಾಗಿ ಗುರುತಿಸಿಕೊಂಡಿವೆ. ಹೊಮ್ಮರಗಳ್ಳಿ ಗ್ರಾಮದ ಬಳಿ ನಾಲ್ಕು, ಹಾರೋಹಳ್ಳಿ ಬಳಿ ಮೂರು, ಕೋಡಿಹಳ್ಳಿಮರ ಬಳಿ ಮೂರು, ಹೈರಿಗೆ ಬಳಿ ಮೂರು ಹಾಗೂ ಕಂಚಮಳ್ಳಿ ಗೇಟ್ ಬಳಿ ಎರಡು ಅಪಘಾತಗಳು ಸಂಭವಿಸಿವೆ. ಈ ಸ್ಥಳಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿರುವುದರಿಂದ ವಾಹನ ಸವಾರರು ಜಾಗರೂಕತೆಯಿಂದ ರಸ್ತೆ ದಾಟಬೇಕು ಮತ್ತು ಸಂಚರಿಸಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಮಾತನಾಡಿ, ಭಾರತದಲ್ಲಿ ಪ್ರತಿ ಮೂರು ನಿಮಿಷಕ್ಕೊಮ್ಮೆ ಒಂದು ರಸ್ತೆ ಅಪಘಾತ ಸಂಭವಿಸುತ್ತಿದೆ. ಸುಮಾರು 62 ಲಕ್ಷ ಕಿಲೋಮೀಟರ್ ರಸ್ತೆ ಸಂಪರ್ಕ ಹೊಂದಿರುವ ಭಾರತದಲ್ಲಿ ರಸ್ತೆ ಅಪಘಾತಗಳ ಪ್ರಮಾಣ ಆತಂಕಕಾರಿಯಾಗಿದೆ. ಅಮೆರಿಕದಲ್ಲಿ ವರ್ಷವೊಂದಕ್ಕೆ ಸುಮಾರು 41 ಸಾವಿರ ಜನರು ರಸ್ತೆ ಅಪಘಾತಗಳಿಂದ ಮೃತಪಟ್ಟರೆ, ಭಾರತದಲ್ಲಿ ವರ್ಷಕ್ಕೆ 1.5 ಲಕ್ಷದಿಂದ 1.8 ಲಕ್ಷದವರೆಗೆ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

ವಾಹನ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಬಾರದು. ವಾಹನದ ವೇಗದ ಮೇಲೆ ನಿಯಂತ್ರಣ ಹೊಂದಿರಬೇಕು. ಮುಂಭಾಗದಲ್ಲಿ ಸಂಚರಿಸುವ ವಾಹನಗಳ ಅಂತರ ಕಾಯ್ದುಕೊಳ್ಳುವ ಜತೆಗೆ ತಿರುವು ಹಾಗೂ ಜನವಸತಿ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್ ಮಾತನಾಡಿ, ಎಚ್.ಡಿ. ಕೋಟೆ ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರದಲ್ಲಿ ಈ ಹಿಂದೆ ಹಲವು ವ್ಯತ್ಯಯಗಳು ಉಂಟಾಗಿದ್ದವು. ಇದೀಗ ಕ್ರಮೇಣ ಸಮಸ್ಯೆಗಳು ಪರಿಹಾರವಾಗುತ್ತಿದ್ದು, ಸಾರಿಗೆ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಿ ಸುಧಾರಣೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಪ್ರದೇಶಗಳಿಂದ ಪ್ರತಿದಿನ ಶಾಲಾ-ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಬಸ್ ಚಾಲಕರು ಮತ್ತು ನಿರ್ವಾಹಕರೇ ರಕ್ಷಕರಿದ್ದಂತೆ. ಹೀಗಾಗಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಪ್ರಯಾಣಿಕರ ಸುರಕ್ಷತೆಯ ಜವಾಬ್ದಾರಿಯನ್ನು ಸಾರಿಗೆ ಸಿಬ್ಬಂದಿ ಅರಿತು ಕಾರ್ಯನಿರ್ವಹಿಸಬೇಕು. ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದರ ಜತೆಗೆ ಸುರಕ್ಷಿತ ಪ್ರಯಾಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಘಟಕ ವ್ಯವಸ್ಥಾಪಕ ತ್ಯಾಗರಾಜ್, ಅಗ್ನಿಶಾಮಕ ದಳದ ಅಶೋಕ್, ಗಣೇಶ್ ರಾಯ್, ಸಹಾಯಕ ಸಂಚಾರ ವ್ಯವಸ್ಥಾಪಕಿ ಪುಷ್ಪಾ, ಕಿರಣ್ ಸೇರಿದಂತೆ ಸಾರಿಗೆ ಇಲಾಖೆಯ ಸಿಬ್ಬಂದಿ ಹಾಗೂ ಚಾಲಕರು, ನಿರ್ವಾಹಕರು ಉಪಸ್ಥಿತರಿದ್ದರು.