ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಜಯಂತಿಯಲ್ಲಿ ಕನಕದಾಸ ಭಾವಚಿತ್ರಕ್ಕೆ ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪುಷ್ಪ ನಮನ ಸಲ್ಲಿಸಿದರು. ಡಾ.ಎನ್.ಆರ್.ಚಂದ್ರೇಗೌಡ, ಪ್ರೊ.ಬಿ.ಸಣ್ಣಪ್ಪ ಇತರರಿದ್ದರು The Great Saint Who Eradicated Hierarchies
ಮೈಸೂರು

ಮೇಲು-ಕೀಳು ತೊಲಗಿಸಿದ ಮಹಾನ್ ಸಂತ

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅನಿಸಿಕೆ

ಮೈಸೂರು: ಕನಕದಾಸರ ಬದುಕು ಮತ್ತು ಸಾಹಿತ್ಯ ಇಂದಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.

ಮೈವಿವಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಘಟಕದ ವತಿಯಿಂದ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಮಾತನಾಡಿದರು.

ಕನಕದಾಸರು ಕೇವಲ ದಾಸ ಸಾಹಿತ್ಯದ ಶ್ರೇಷ್ಠ ಕವಿಯಷ್ಟೇ ಅಲ್ಲ, ಸಾಮಾಜಿಕ ಪರಿವರ್ತನೆಯ ಹರಿಕಾರರು. ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿದ್ದ ಜಾತಿ, ಅಸಮಾನತೆ, ಮೂಢನಂಬಿಕೆ, ಮೇಲು-ಕೀಳು ಎಂಬ ಭಾವನೆವನ್ನು ಪ್ರಶ್ನಿಸಿ ಸಮಾನತೆಯ ಸಂದೇಶ ಸಾರಿದ ಮಹಾನ್ ಸಂತರು ಎಂದರು.

ಸಾಹಿತ್ಯದ ಮೂಲಕ ಮನುಷ್ಯನಲ್ಲಿರುವ ಅಹಂಕಾರ, ಅಜ್ಞಾನ, ಸಾಮಾಜಿಕ ತಾರತಮ್ಯ ತೊಡೆದುಹಾಕಲು ಪ್ರಯತ್ನಿಸಿದರು. ಭಕ್ತಿಯ ಜತೆಗೆ ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ಆತ್ಮಗೌರವದ ಮೌಲ್ಯ ಪ್ರತಿಪಾದಿಸಿದರು ಎಂದರು.

ಕನಕದಾಸರ ಕೀರ್ತನೆಗಳು ಸರಳ ಭಾಷೆ, ಆಳವಾದ ಅರ್ಥ, ಜೀವನಾನುಭವದಿಂದ ಕೂಡಿವೆ. ಸಾಮಾನ್ಯ ಜನರಿಗೂ ಅರ್ಥವಾಗುವ ಜನಭಾಷೆಯಲ್ಲಿ ತತ್ವಜ್ಞಾನವನ್ನು ಬಿತ್ತಿದ ಅವರ ಸಾಹಿತ್ಯ ಕನ್ನಡದ ಸಾಂಸ್ಕೃತಿಕ ಪರಂಪರೆ ಶ್ರೀಮಂತಗೊಳಿಸಿದೆ. ’ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಅವರ ಸಂದೇಶವು ಮನುಷ್ಯರೆಲ್ಲರೂ ಸಮಾನರು ಎಂಬ ಉದಾತ್ತ ಚಿಂತನೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಶಿಕ್ಷಣವು ಕೇವಲ ಪದವಿ ಮತ್ತು ಉದ್ಯೋಗ ಪಡೆಯುವ ಸಾಧನವಾಗಬಾರದು. ಅದು ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ, ಸಾಮಾಜಿಕ ಜವಾಬ್ದಾರಿ, ವೈಚಾರಿಕತೆ, ಸಮಾನತೆಯ ಮನೋಭಾವ ಬೆಳೆಸಬೇಕು. ಸಾಹಿತ್ಯದ ಅಧ್ಯಯನವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆ, ಉತ್ತಮ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಹ ಪ್ರಾಧ್ಯಾಪಕ ಡಾ.ಎನ್.ಆರ್.ಚಂದ್ರೇಗೌಡ, ಘಟಕದ ಸಂಯೋಜನಾಧಿಕಾರಿ ಪ್ರೊ.ಬಿ.ಸಣ್ಣಪ್ಪ, ಪ್ರಭಾರ ಕುಲಸಚಿವ ಪ್ರೊ.ಎಸ್.ಜೆ.ಮಂಜುನಾಥ್ ಇದ್ದರು