ನಂಜನಗೂಡು: ಅಖಂಡ ಕರ್ನಾಟಕವನ್ನು ಕಟ್ಟುವಲ್ಲಿ ಹಲವಾರು ದಶಕಗಳ ಹೋರಾಟದ ಫಲ, ಮತ್ತು ಕನ್ನಡಿಗರ ತ್ಯಾಗ ಬಲಿದಾನದ ಇತಿಹಾಸವಿದೆ. ಅಂತಹ ಕನ್ನಡಪರ ಹೋರಾಟದ ಇತಿಹಾಸವನ್ನು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸುವ ಮೂಲಕ ಭಾಷಾಭಿಮಾನವನ್ನು ಬೆಳೆಸಬೇಕು ಎಂದು ಶಾಸಕ ದರ್ಶನ್ ದೃವನಾರಾಯಣ್ ಹೇಳಿದರು.
ನಗರದ ಚಿದಂಬರ ಬಡಾವಣೆಯಲ್ಲಿ ಕನ್ನಡ ಸ್ನೇಹ ಬಳಗದ ವತಿಯಿಂದ ಮಂಗಳವಾರ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸಲು ನಾವು ಹೆಚ್ಚು ಹೆಚ್ಚು ಕನ್ನಡ ಭಾಷೆಯನ್ನು ಬಳಸುವ ಜತೆಗೆ ನಮ್ಮ ಮಕ್ಕಳಿಗೆ ಕನ್ನಡದ ಹೋರಾಟದ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ಜತೆಗೆ ನಮ್ಮ ವ್ಯವಹಾರಿಕ ಭಾಷೆಯಾಗಿ ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ನಮ್ಮ ಮಕ್ಕಳಿಗೂ ಕನ್ನಡ ಕಲಿಸಬೇಕು. ಪ್ರಮುಖವಾಗಿ ಮೊಬೈಲ್ ಬಳಕೆಯಿಂದ ದೂರವಿಟ್ಟು ಓದುವ ಹವ್ಯಾಸ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೇರಣೆಗೊಳಿಸಬೇಕು ಎಂದರು.
ಮುಖ್ಯ ಭಾಷಣಕಾರ ಸತ್ಯನಾರಾಯಣ ಮಾತನಾಡಿ, ನಂಜನಗೂಡು ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಕನ್ನಡದ ಚಲನಚಿತ್ರ ಪ್ರಥಮ ನಿರ್ದೇಶಕ ಜಿ.ವಿ.ಅಯ್ಯರ್, ಕನ್ನಡದ ಪ್ರಥಮ ಲೇಖಕಿ ತಿರುಮಲಾಂಬ ಸೇರಿದಂತೆ ಹಲವಾರು ಮಹನೀಯರು ಕರ್ನಾಟಕದ ಸಾಹಿತ್ಯ ಪರಂಪರೆಗೆ ಕೊಡುಗೆಯನ್ನು ನೀಡಿದವರಾಗಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ಶ್ರೀಕಂಠೇಶ್ವರ ದೇವಾಲಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಸವೇಗೌಡ, ಕನ್ನಡ ಸ್ನೇಹ ಬಳಗದ ಅಧ್ಯಕ್ಷ ಪ್ರಕಾಶ್, ಸಿ.ಸಿ.ಮಹೇಶ, ರಾಜೇಂದ್ರ, ವೀರಭದ್ರಾಚಾರ್ ಉಪಸ್ಥಿತರಿದ್ದರು.