ಮೈಸೂರು: ಸುಗಮ ಸಂಗೀತವೆಂದರೆ ಕೇವಲ ರಾಗ, ತಾಳಗಳ ಸಂಗಮವಲ್ಲ, ಅದು ಕನ್ನಡ ಭಾಷೆಯ ಸೊಗಡು, ಕವಿಯ ಭಾವನೆ, ಗಾಯಕರ ಕಂಠದ ಮೂಲಕ ಅನಾವರಣಗೊಳ್ಳುವ ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆ. ಈ ಅಮೂಲ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಸುಗಮ ಸಂಗೀತ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಸುಗಮ ಸಂಗೀತ ಶತಮಾನೋತ್ಸವದ ಅಂಗವಾಗಿ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಸಮಿತಿ, ಶ್ರೀ ಅನಂತೇಶ್ವರ ಟ್ರಸ್ಟ್ ಸಹಯೋಗದಲ್ಲಿ ವಿಶ್ವೇಶ್ವರನಗರದ ಬಿಲ್ಡರ್‌ಗಳ ಸಂಘದ ಸಭಾಂಗಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಭಾವ ತರಂಗದ ಕನ್ನಡದ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ನಾಡಿನ ಸಂಗೀತ ಪರಂಪರೆಯಲ್ಲಿ ಸುಗಮ ಸಂಗೀತಕ್ಕೆ ವಿಶಿಷ್ಟವಾದ ಸ್ಥಾನವಿದೆ. ಸಾಹಿತ್ಯ, ಸಂಗೀತದ ಸುಂದರ ಸಮನ್ವಯವೇ ಸುಗಮ ಸಂಗೀತ. ಕವಿತೆಗಳಲ್ಲಿನ ಜೀವನಾನುಭವ, ಪ್ರಕೃತಿ ಪ್ರೀತಿ, ಪ್ರೇಮ, ಮಾನವೀಯತೆ, ಸಾಮಾಜಿಕ ಕಳಕಳಿ, ನಾಡು-ನುಡಿಯ ಅಭಿಮಾನವನ್ನು ಸಂಗೀತದ ಮೂಲಕ ಜನರಿಗೆ ತಲುಪಿಸುವಲ್ಲಿ ಈ ಕಲೆ ಮಹತ್ವದ ಪಾತ್ರ ವಹಿಸಿದೆ ಎಂದರು.
ಸುಗಮ ಸಂಗೀತದ ಬೆಳವಣಿಗೆಯಲ್ಲಿ ಮೈಸೂರು ಅನಂತಸ್ವಾಮಿ ಅವರ ಕೊಡುಗೆ ಅಪಾರ. ಅವರ ಸಂಗೀತ ಸಂಯೋಜನೆಗಳು ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿವೆ. ಅವರೊಂದಿಗೆ ಪಿ.ಕಾಳಿಂಗರಾವ್, ಸಿ.ಅಶ್ವತ್ಥ್, ಎಚ್.ಆರ್.ಲೀಲಾವತಿ, ರತ್ನಮಾಲಾ ಪ್ರಕಾಶ್, ಮೈಸೂರು ಮಂಜುನಾಥ್ ಸೇರಿದಂತೆ ಅನೇಕ ಕಲಾವಿದರು ಈ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಸ್ಮರಿಸಿದರು.
ಎಂಎಲ್‌ಸಿ ಡಾ. ಡಿ.ತಿಮ್ಮಯ್ಯ ಮಾತನಾಡಿ, ಸಂಗೀತ ಕೇವಲ ಮನರಂಜನೆಯ ಸಾಧನವಲ್ಲ. ಅದು ಮಾನಸಿಕ ಆರೋಗ್ಯವನ್ನು ಕಾಪಾಡುವ, ಒತ್ತಡವನ್ನು ಕಡಿಮೆ ಮಾಡುವ, ಜೀವನದಲ್ಲಿ ಸಂತೋಷ ಹಾಗೂ ಉತ್ಸಾಹವನ್ನು ಹೆಚ್ಚಿಸುವ ಶಕ್ತಿಯುತ ಮಾಧ್ಯಮ ಎಂದರು.
ಸಂಗೀತವು ಇದು ಮಾನಸಿಕವಾಗಿ ಕುಗ್ಗಿದಾಗ ಅಥವಾ ಯಾವುದಾದರೂ ವಿಷಯದಿಂದ ಬೇಸರಗೊಂಡಾಗ ಮನಸ್ಸಿಗೆ ಚೈತನ್ಯ ತುಂಬುತ್ತದೆ. ಜತೆಗೆ ನೆಮ್ಮದಿ ಒದಗಿಸುವ ಹಾಡುಗಳನ್ನು ಕೇಳುವುದು ಉತ್ತಮ. ಅದೇ ರೀತಿ ಕಷ್ಟ, ನೋವು, ದುಃಖದ ಸಂದರ್ಭಗಳಲ್ಲೂ ಸಂಗೀತ ಮನಸ್ಸಿಗೆ ಸಾಂತ್ವನ ನೀಡುತ್ತದೆ ಎಂದು ಹೇಳಿದರು.
ಆರೋಗ್ಯವೆಂದರೆ ಕೇವಲ ರೋಗಗಳಿಂದ ಮುಕ್ತವಾಗುವುದಲ್ಲ. ಒಬ್ಬ ವ್ಯಕ್ತಿ ದೈಹಿಕ, ಮಾನಸಿಕ, ಸಾಮಾಜಿಕವಾಗಿ ಸಂಪೂರ್ಣ ಕ್ಷೇಮದಿಂದಿರುವುದೇ ನಿಜವಾದ ಆರೋಗ್ಯ. ಆರೋಗ್ಯವಂತ ಜೀವನಕ್ಕೆ ಈ ಮೂರೂ ಅಂಶಗಳು ಮುಖ್ಯ. ಈ ಪೈಕಿ ಮಾನಸಿಕ ಆರೋಗ್ಯವೂ ಮಹತ್ವದ ಪಾತ್ರ ವಹಿಸುತ್ತದೆ ಎಂದರು.
ಕೆ.ಆರ್.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಎಚ್.ಪಿ.ಶೋಭಾ ಮಾತನಾಡಿ, ಸಂಗೀತವು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ವೈಜ್ಞಾನಿಕ ಅಧ್ಯಯನಗಳ ಪ್ರಕಾರ, ಸಂಗೀತ ಆಲಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮನಸ್ಸಿಗೆ ನೆಮ್ಮದಿ ದೊರೆಯುವುದರೊಂದಿಗೆ ನಿದ್ರೆಯ ಗುಣಮಟ್ಟವೂ ಸುಧಾರಿಸುತ್ತದೆ ಎಂದು ಹೇಳಿದರು.
ಸಂಗೀತ, ಗಾಯನವು ಉಸಿರಾಟದ ಸಾಮರ್ಥ್ಯ ಹಾಗೂ ಶ್ವಾಸಕೋಶಗಳ ಕಾರ್ಯಕ್ಷಮತೆಯ ಮೇಲೂ ಸಕಾರಾತ್ಮಕ ಪರಿಣಾಮ ಬೀರಬಹುದು. ವಿಶೇಷವಾಗಿ ಗಾಯನ ಅಭ್ಯಾಸವು ಉಸಿರಾಟದ ನಿಯಂತ್ರಣಕ್ಕೆ ಸಹಕಾರಿ ಎಂದೂ ಹೇಳಿದರು.
ಬಳಿಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಸುಗಮಸಂಗೀತ ಗೀತೆಗಳ ಗಾಯನ ನಡೆಯಿತು. ಗಾಯಕರಾದ ನಾಗಚಂದ್ರಿಕಾ ಭಟ್, ಸೀಮಾ ರಾಯ್ಕರ್, ಡಾ.ಅಮಿತ್ ಶೇಖರ್, ಲಿಖಿತ್ ಕೃಷ್ಣ ವಿವಿಧ ಗೀತೆಗಳನ್ನು ಪ್ರಸ್ತುತ ಪಡಿಸಿದರು. ಅಭಿಷೇಕ್, ಪುರುಷೋತ್ತಮ್ ರೋಷನ್ ಸೂರ್ಯ,ಪುನೀತ್, ಜನಾರ್ಧನ್ ಪಕ್ಕದ ವಾದ್ಯದಲ್ಲಿ ಸಹಕಾರ ನೀಡಿದರು.
ಸಾಹಿತಿ ಡಾ. ಸಂತೋಷ್ ಚೊಕ್ಕಾಡಿ, ಸುಗಮ ಸಂಗೀತ ಗಾಯಕಿ ಸಾಮಿತ್ರಿ ಪ್ರಭಾಕರ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕೀ ಬೋರ್ಡ್ ವಾದಕ ಪುರುಷೋತ್ತಮ್ ಕಿರಗಸೂರು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ಡಾ. ನಾಗರಾಜ್ ವಿ.ಬೈರಿ ಸೇರಿದಂತೆ ಇನ್ನಿತರರಿದ್ದರು.