ಸ್ವಗ್ರಾಮ ಸಿದ್ದರಾಮನಹುಂಡಿಯ ರಂಗನಾಥಪುರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅದ್ದೂರಿ ಸ್ವಾಗತ ದೊರೆಯಿತು. ಸಚಿವ ಡಾ.ಯತೀಂದ್ರ ಇನ್ನಿತರರಿದ್ದರು. Humanity is the true religion: Siddaramaiah's statement
ಮೈಸೂರು

ಮಾನವೀಯತೆಯೇ ನಿಜವಾದ ಧರ್ಮ: ಸಿದ್ದರಾಮಯ್ಯ ಹೇಳಿಕೆ

ಒಳಿತು ಬಯಸುವ ಗುಣಗಳಿಂದ ದೈವತ್ವಕ್ಕೆ ಹತ್ತಿರವಾಗಲು ಸಾಧ್ಯ

ನಾನು ಶಿಕ್ಷಣ ಪಡೆದಿದ್ದರಿಂದಲೇ ಶಾಸಕ, ಡಿಸಿಎಂ, ಪ್ರತಿಪಕ್ಷದ ನಾಯಕ, ಸಿಎಂ ಆಗಿ ವಿವಿಧ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಯಿತು. ಶಿಕ್ಷಣ ಪಡೆಯದೇ ಇದ್ದಿದ್ದರೆ ಈ ಸ್ಥಾನಗಳಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು. ಮಕ್ಕಳಿಗೆ ಉಚಿತ ಶಿಕ್ಷಣದ ಅವಕಾಶವಿದೆ. ಪ್ರತಿಯೊಬ್ಬರೂ ಅದರ ಪ್ರಯೋಜನ ಪಡೆದುಕೊಂಡು ಶಿಕ್ಷಣ ಪಡೆಯಬೇಕು. ಉದ್ಯೋಗ ದೊರೆಯಲಿ ಅಥವಾ ದೊರೆಯದಿರಲಿ, ಶಿಕ್ಷಣದಲ್ಲಿ ಯಾರೂ ಹಿಂದುಳಿಯಬಾರದು. ಶಿಕ್ಷಣವು ವ್ಯಕ್ತಿಗೆ ಜ್ಞಾನ, ಆತ್ಮವಿಶ್ವಾಸ, ಗೌರವಯುತ ಬದುಕುವ ಸಾಮರ್ಥ್ಯ ನೀಡುತ್ತದೆ.
ಸಿದ್ದರಾಮಯ್ಯ, ಮಾಜಿ ಸಿಎಂ

ಮೈಸೂರು: ಮನುಷ್ಯರು ಪರಸ್ಪರ ಪ್ರೀತಿ, ವಿಶ್ವಾಸ, ಮಾನವೀಯತೆಯಿಂದ ಬದುಕುವುದೇ ನಿಜವಾದ ಧರ್ಮ. ಒಳ್ಳೆಯ ನಡೆ-ನುಡಿ, ಇತರರಿಗೆ ಒಳಿತನ್ನು ಬಯಸುವ ಗುಣಗಳ ಮೂಲಕವೇ ದೈವತ್ವಕ್ಕೆ ಹತ್ತಿರವಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವರುಣ ಕ್ಷೇತ್ರದ ಸಿದ್ದರಾಮನಹುಂಡಿಯ ರಂಗನಾಥಪುರದಲ್ಲಿ ಶುಕ್ರವಾರ ಆಯೋಜಿಸಿದ್ದ ದಂಡಿನ ಮಾರಮ್ಮ ದೇವಾಲಯದ ಮರು ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ದೇವರು ಕೇವಲ ದೇವಸ್ಥಾನದಲ್ಲಿ ಮಾತ್ರ ಇರುವುದಿಲ್ಲ. ಪ್ರತಿಯೊಬ್ಬರ ಹೃದಯದಲ್ಲೂ ನೆಲೆಸಿದ್ದಾನೆ. ದೇವಸ್ಥಾನ ಎನ್ನುವುದು ಕೇವಲ ಕಟ್ಟಡವಲ್ಲ, ಅದು ಭಕ್ತಿ, ನಂಬಿಕೆಯ ಪ್ರತೀಕ ಎಂದರು.

ದೇವಸ್ಥಾನ ಕಟ್ಟಿದ ಮಾತ್ರಕ್ಕೆ ದೇವರು ಬರುವುದಿಲ್ಲ. ದೇವರು ಎಲ್ಲ ಕಡೆಯೂ ಇದ್ದಾನೆ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ದೇವರನ್ನು ಪೂಜಿಸುವ ಜತೆಗೆ ಒಳ್ಳೆಯ ಮನುಷ್ಯರಾಗಿ ಬದುಕುವುದು ಮುಖ್ಯ. ಇತರರನ್ನು ಪ್ರೀತಿಸುವುದು, ಎಲ್ಲರನ್ನೂ ಮನುಷ್ಯರಾಗಿ ಕಾಣುವುದು, ಯಾರಿಗೂ ಕೆಡುಕು ಬಯಸದಿರುವುದೇ ಧರ್ಮದ ಮೂಲ ಸಾರವಾಗಿದೆ ಎಂದರು.

ದೇವರು ಒಬ್ಬನೇ ಆಗಿದ್ದರೂ ಆತನನ್ನು ವಿವಿಧ ಹೆಸರಿನಿಂದ ಆರಾಧಿಸಲಾಗುತ್ತದೆ. ದೇವರ ದೃಷ್ಟಿಯಲ್ಲಿ ಸಂಪ್ರದಾಯ, ಆಚರಣೆಗಳಿಗಿಂತ ಮಾನವೀಯತೆ ಮುಖ್ಯ. ಶುದ್ಧ ಭಕ್ತಿ, ಒಳ್ಳೆಯ ನಡೆನುಡಿ, ಇತರರ ಬಗ್ಗೆ ಪ್ರೀತಿ ಮತ್ತು ಕಾಳಜಿ ಹೊಂದಿರುವುದು ಅಗತ್ಯ. ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಕೇವಲ ಪೂಜೆ, ಆಚರಣೆಗಳಿಂದ ದೇವರು ಸಂತೃಪ್ತನಾಗುವುದಿಲ್ಲ. ಇತರರಿಗೂ ಒಳ್ಳೆಯದನ್ನೇ ಬಯಸುವ ಗುಣ ಇದ್ದಾಗ ಮಾತ್ರ ನಿಜವಾದ ಭಕ್ತಿಗೆ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಹುಟ್ಟೂರಿನ ಜನರೊಂದಿಗಿನ ಬಾಂಧವ್ಯವನ್ನು ಸ್ಮರಿಸಿದ ಅವರು, ತಾಲೂಕು ಬೋರ್ಡ್ ಚುನಾವಣೆಯಿಂದ ಆರಂಭಿಸಿ ಈ ವರೆಗೆ 13 ಚುನಾವಣೆ ಎದುರಿಸಿದ್ದೇನೆ. ತಾವು ಯಾವುದೇ ಚುನಾವಣೆಗೆ ಸ್ಪರ್ಧಿಸಿದರೂ ಈ ಊರಿನ ಜನರು ಬೆಂಬಲಿಸಿದ್ದಾರೆ. ತಮ್ಮನ್ನು ಪ್ರೀತಿ, ಅಭಿಮಾನದಿಂದ ಕಂಡಿದ್ದಾರೆ. ಕಷ್ಟದ ಸಂದರ್ಭದಲ್ಲೂ ಕೈಹಿಡಿದು ಬೆಂಬಲಿಸಿದ್ದಾರೆ. ಜನರು ತೋರಿದ ಪ್ರೀತಿ, ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಈ ಊರಿನ ಜನರೊಂದಿಗೆ ನನಗೆ ವಿಶೇಷವಾದ ಭಾವನಾತ್ಮಕ ಸಂಬಂಧವಿದೆ. ಇಲ್ಲಿಯೇ ಹುಟ್ಟಿ ಬೆಳೆದಿರುವುದರಿಂದ ಜನರ ಕಷ್ಟಸುಖ ಅರಿತಿದ್ದೇನೆ. ಜನರು ನೀಡಿದ ಬೆಂಬಲದಿಂದಲೇ ರಾಜಕೀಯ ಜೀವನದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿದರು.

ತಮ್ಮ ವಯಸ್ಸು ಮತ್ತು ರಾಜಕೀಯ ಬದುಕನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು, ಈಗ 79 ವರ್ಷ ತುಂಬಿ 80ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ. ಜನರು ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಸದಾ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.

ಅಧಿಕಾರ ಯಾರಿಗೂ ಶಾಶ್ವತವಲ್ಲ. ಅಧಿಕಾರ ಎನ್ನುವುದು ಸಮಾಜದಲ್ಲಿ ಬದಲಾವಣೆ ತರುವ ಒಂದು ಮಾರ್ಗವಷ್ಟೇ. ಅಧಿಕಾರದ ಮೂಲಕ ಅವಕಾಶ ವಂಚಿತರಿಗೆ ನ್ಯಾಯ ಒದಗಿಸುವುದು, ಸಮಾಜದಲ್ಲಿ ಸಮಾನತೆ ತರುವುದು ಮುಖ್ಯ. ಇದೇ ಕಾರಣಕ್ಕಾಗಿ ತಮ್ಮ ರಾಜಕೀಯ ಬದುಕಿನಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ನಿಂತಿದ್ದೇನೆ. ಸಮಾಜದಲ್ಲಿ ಬದಲಾವಣೆ ತರುವುದೇ ಅಧಿಕಾರದ ಮೂಲ ಉದ್ದೇಶವಾಗಬೇಕು ಎಂದು ಅಭಿಪ್ರಾಯಪಟ್ಟರು.

ದೇವಸ್ಥಾನಕ್ಕೆ ಬರುವ ಭಕ್ತರು ಕೇವಲ ಪೂಜೆ ಸಲ್ಲಿಸುವುದಕ್ಕೆ ಸೀಮಿತವಾಗದೆ, ಒಳ್ಳೆಯ ಮನುಷ್ಯರಾಗಿ ಬದುಕುವ ಗುಣ ಬೆಳೆಸಿಕೊಳ್ಳಬೇಕು. ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಕುರಿತು ಮಾತನಾಡಿದ ಅವರು, ಸುಮಾರು 30 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಯುತ್ತಿತ್ತು. ಹಿಂದಿನ ಯಾವುದೇ ಸರ್ಕಾರ ಈ ಕೆಲಸವನ್ನು ಮಾಡಿರಲಿಲ್ಲ. ತಾವು ಮುಖ್ಯಮಂತ್ರಿಯಾಗಿದ್ದಾಗ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದು, ಅದರ ಫಲ ಇಂದು ಸಮುದಾಯಗಳಿಗೆ ದೊರೆಯುತ್ತಿದೆ ಎಂದು ಹೇಳಿದರು.

ಜಾತೀಯತೆ, ಅಸಮಾನತೆ, ತಾರತಮ್ಯ ತೊಡೆದುಹಾಕಲು ಕೇವಲ ಮಾತುಗಳಿಂದ ಸಾಧ್ಯವಿಲ್ಲ. ಎಲ್ಲರಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ ಶಕ್ತಿ ತುಂಬಬೇಕು. ಅವಕಾಶ ವಂಚಿತ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗ, ಆರ್ಥಿಕ ಸಬಲೀಕರಣದ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.

ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಗ್ರಾಮ ಮುಖಂಡರು ಪಾಲ್ಗೊಂಡಿದ್ದರು.