ಮೈಸೂರು: ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ, ಹಕ್ಕು ಮತ್ತು ಸ್ವಾಭಿಮಾನದ ಬದುಕಿನ ಹಿಂದೆ ಅಸಂಖ್ಯಾತ ಮಹನೀಯರ ತ್ಯಾಗ, ಬಲಿದಾನ ಅಡಗಿದೆ. ಅವರ ಕೊಡುಗೆಯನ್ನು ಸ್ಮರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸೆಸ್ಕ್ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ನಗರದ ವಿಜಯನಗರ 2ನೇ ಹಂತದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ (ಸೆಸ್ಕ್)ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಪಿತ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಸಂಘಟನೆ ಮಾಡಿ ನಾಯಕತ್ವ ವಹಿಸಿದವರು ಗಾಂಧಿ. ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದ ಅವರು, ಜಗತ್ತಿಗೆ ಮಾದರಿಯಾದರು. ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದ ಏಕೈಕ ದೇಶ ಭಾರತವಾಗಿದೆ ಎಂದು ಹೇಳಿದರು.
ಸಮಾಜಕ್ಕೆ ನಾವು ಕಿಂಚಿತ್ತಾದರೂ ಕೊಡುಗೆ ನೀಡುವ ಕೆಲಸ ಮಾಡಿದ್ದೇ ಆದಲ್ಲಿ ಮಹನೀಯರ ಆದರ್ಶ ಮತ್ತು ಕನಸುಗಳು ಸಾಕಾರಗೊಳ್ಳಲಿವೆ. ಪ್ರತಿಯೊಬ್ಬರೂ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಜತೆಗೆ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು. ಇದೇ ಗಾಂಧಿ, ಶಾಸ್ತ್ರಿ ಅವರಂತಹ ಮಹನೀಯರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಹೇಳಿದರು.
ಉಭಯ ಮಹನೀಯರ ಭಾವಚಿತ್ರಗಳಿಗೆ ರಮೇಶ್ ಬಂಡಿಸಿದ್ದೇಗೌಡ ಅವರೊಂದಿಗೆ ಇತರ ಅಧಿಕಾರಿಗಳು, ಸಿಬ್ಬಂದಿ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.
ಸೆಸ್ಕ್ ತಾಂತ್ರಿಕ ನಿರ್ದೇಶಕ ಎಲ್.ಲೋಕೇಶ್, ಮುಖ್ಯ ಆರ್ಥಿಕ ಅಧಿಕಾರಿ ಜಿ.ರೇಣುಕಾ, ಮುಖ್ಯ ಪ್ರಧಾನ ವ್ಯವಸ್ಥಾಪಕಿ (ತಾಂತ್ರಿಕ) ಶರಣಮ್ಮ ಎಸ್. ಜಂಗಿನ, ಮುಖ್ಯ ಪ್ರಧಾನ ವ್ಯವಸ್ಥಾಪಕ ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕರಾದ ಕೆ. ರೂಪಶ್ರೀ, ಆರ್. ರಾಮಸ್ವಾಮಿ, ದಿನೇಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.