ನಂಜನಗೂಡು: ಖಾಸಗಿ ವಿದ್ಯಾಸಂಸ್ಥೆಯ ಶಾಲಾ ವಾಹನ ಡಿಕ್ಕಿಯಾಗಿ ಆರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದಾರೆ.
ತಾಲೂಕಿನ ನಗರ್ಲೆ ಗ್ರಾಮದ 6ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಅಬೂ ಸೂಫಿಯಾನ್, ಪೂರ್ವ ಪ್ರಾಥಮಿಕ ಶಾಲೆಯ ಗಗನ್, ನಾಲ್ಕನೇ ತರಗತಿ ವಿದ್ಯಾರ್ಥಿ ಮಯುಕ್ತ್, ಗೋನಹಳ್ಳಿಯ ಮೂರನೇ ತರಗತಿ ವಿದ್ಯಾರ್ಥಿ ಭರತ್, ಮಾನಸ, ಜಿ.ಮರಹಳ್ಳಿ ಗ್ರಾಮದ ಪೂರ್ವಿಕಾ ಗಾಯಗೊಂಡವರು.
ತಾಲೂಕಿನ ಗೀಕಳ್ಳಿ ಬಳಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ವಾಹನ ಸೋಮವಾರ ಸಂಜೆ ಶಾಲೆ ಮುಗಿದ ಬಳಿಕ ಮಕ್ಕಳನ್ನು ಮನೆಗೆ ಬಿಡಲು ಕರೆದೊಯ್ಯತ್ತಿತ್ತು. ಬಸ್ನಲ್ಲಿ ಸುಮಾರು 42 ಮಕ್ಕಳಿದ್ದರು. ಗೋಣಹಳ್ಳಿ ಸಮೀಪ ತಿರುವಿನಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿನ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗಾಯಗೊಂಡ ಮಕ್ಕಳನ್ನು ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ನಾಲ್ವರು ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ನಂಜನಗೂಡು ಉಪ ವಿಭಾಗದ ಸಿಪಿಐ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.