ಲೋಕ ಅದಾಲತ್ Elderly couple reunites after setting aside differences.
ಮೈಸೂರು

ಮನಸ್ತಾಪ ಮರೆತು ಒಂದಾದ ವೃದ್ಧ ದಂಪತಿ

ಜೋಡಿ ಮರು ಸಮ್ಮಿಲನಕ್ಕೆ ಲೋಕ ಅದಾಲತ್ ಸಾಕ್ಷಿ

ಮೈಸೂರು: ಪರಸ್ಪರ ದೂರವಾಗಲು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ವೃದ್ಧ ದಂಪತಿ, ತಮ್ಮ ಮನಸ್ತಾಪ ಮರೆತು ಮತ್ತೆ ಒಂದಾಗಿ ಬಾಳುವ ಸಂಕಲ್ಪ ಮಾಡಿದ್ದಾರೆ.

ನಗರದ ಮಳಲವಾಡಿ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಲೋಕ ಅದಾಲತ್ ಇಂತಹವೊಂದು ಪ್ರಸಂಗಕ್ಕೆ ಸಾಕ್ಷಿಯಾಯಿತು.

ಸತಿ-ಪತಿಗಳ ತಮ್ಮ ನಡುವಿನ ಕಲಹ ಮರೆತು ಜತೆಯಾಗಿ ಜೀವನ ನಡೆಸಲು ಒಪ್ಪಿಕೊಂಡಿದ್ದಾರೆ. ಇದು ಈ ಜೋಡಿ ಮರು ಸಮ್ಮಿಲನಕ್ಕೆ ಈ ಅದಾಲತ್ ಕಾರಣವಾಯಿತು.

2022ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ 60 ವರ್ಷ ಮೇಲ್ಪಟ್ಟ ಈ ದಂಪತಿ, ತಮ್ಮ ಮುನಿಸು ಮರೆತು ಮತ್ತೆ ಒಂದಾದರು. ಪತ್ನಿಯನ್ನು ತೊರೆಯಲು ಮುಂದಾಗಿದ್ದ ವ್ಯಕ್ತಿ, ಪುತ್ರನ ಮನವಿಗೆ ಓಗೊಟ್ಟು ಮನಸ್ಸು ಬದಲಾಯಿಸಿದರು.

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಲೋಕ್ ಅದಾಲತ್ ಅನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳಲ್ಲಿ ಕಾನೂನಿನ ಪ್ರಕಾರ ರಾಜಿಯಾಗಬಹುದಾದ ಪ್ರಕರಣ, ವಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸುವ ಉದ್ದೇಶದಿಂದ ಇದನ್ನು ಆಯೋಜಿಸಲಾಗಿತ್ತು.

‘ನಗರದ 4 ಕೌಟುಂಬಿಕ ನ್ಯಾಯಾಲಯಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ 231 ಪ್ರಕರಣಗಳನ್ನು ರಾಜಿಯಾಗಬಹುದಾದ ಪ್ರಕರಣ ಎಂದು ಗುರುತಿಸಲಾಗಿತ್ತು. ಈ ಪೈಕಿ 140 ಪ್ರಕರಣ ಇತ್ಯರ್ಥಗೊಂಡಿದೆ. ಅರ್ಜಿದಾರರ ಗೈರಿನಿಂದ ಕೆಲ ಪ್ರಕರಣ ಬಾಕಿಯಾಗಿವೆ. ಒಂದು ತಿಂಗಳಲ್ಲಿ ಗರಿಷ್ಠ ಮಟ್ಟದಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ಕುಜಿ ತಿಳಿಸಿದರು.