ಬೆಟ್ಟದಪುರ: ಮದ್ಯವ್ಯಸನದಿಂದ ಇಡೀ ಕುಟುಂಬದ ಮೇಲೆ ಪರಿಣಾಮ ಬೀರಲಿದ್ದು, ಜೀವನದಲ್ಲಿ ನೆಮ್ಮದಿಯೂ ಹಾಳಾಗುತ್ತದೆ. ಇದು ಸಾಮಾಜಿಕ ಪಿಡುಗಾಗಿದೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕೊಡಗು ಜಿಲ್ಲಾಧ್ಯಕ್ಷ ಎ.ಟಿ ರಂಗಸ್ವಾಮಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮದ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಬೆಟ್ಟದಪುರ ಯೋಜನಾ ಕಚೇರಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜನಜಾಗೃತಿ ಕಾರ್ಯಕ್ರಮಗಳ ಮೂಲಕ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ನಿರಂತರವಾಗಿ ಶ್ರಮಿಸುತ್ತಿದೆ. ಶಿಬಿರಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.
ಕಿತ್ತೂರಿನ ಹಿರಿಯ ಮುಖಂಡ ಅಣ್ಣಯ್ಯಶೆಟ್ಟಿ ಮಾತನಾಡಿ, ಮದ್ಯವ್ಯಸನಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಚಿಕಿತ್ಸೆ ನೀಡುವ ಮೂಲಕ ಅವರನ್ನು ವ್ಯಸನ ಮುಕ್ತರನ್ನಾಗಿಸಲು ಮದ್ಯವರ್ಜನ ಶಿಬಿರಗಳು ಪೂರಕವಾಗಿವೆ ಎಂದರು.
ಮದ್ಯಪಾನದಿಂದ ವ್ಯಕ್ತಿಯ ಆರೋಗ್ಯ ಹದಗೆಡುವುದರ ಜತೆಗೆ ಕುಟುಂಬದಲ್ಲಿ ಅಶಾಂತಿ ಉಂಟಾಗಿ ಆರ್ಥಿಕ ಸಂಕಷ್ಟ ಎದುರಾಗುತ್ತದೆ. ಮದ್ಯವ್ಯಸನದಿಂದ ಹೊರಬರಲು ದೃಢ ಸಂಕಲ್ಪದೊಂದಿಗೆ ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು. ವ್ಯಸನಮುಕ್ತ ಜೀವನ ನಡೆಸುವ ಮೂಲಕ ಕುಟುಂಬದ ಹಾಗೂ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನಿಕಟಪೂರ್ವ ಉಪಾಧ್ಯಕ್ಷ ಬಿ.ಜೆ. ದೇವರಾಜು, ಮುಖಂಡರಾದ ಗಗನ್ ತಿಲಕ್, ಕೆ.ಜೆ.ವೆಂಕಟೇಶ್, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್. ಜಗದೀಶ್, ಗೌರವಾಧ್ಯಕ್ಷ ಜಗದೀಶ್, ಪಿಡಿಒ ಡಿ.ಆರ್. ಮನು, ವೈದ್ಯಾಧಿಕಾರಿ ಡಾ.ಕಾರ್ತಿಕ್, ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕ ವಿಠಲ ಸಾಲ್ಯಾನ್, ಯೋಜನಾಧಿಕಾರಿ ಶೇಖರ್ ಗೌಡ ಸೇರಿದಂತೆ ವ್ಯವಸ್ಥಾಪನ ಸಮಿತಿ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಇತರರು ಇದ್ದರು.