ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಗ್ರಾಮದ ಜೈ ಭೀಮ್ ಆಟೋ ಚಾಲಕರು ಮತ್ತು ಮಾಲೀಕರು ಸಂಘದಿಂದ 71ನೇ ಕನ್ನಡ ರಾಜ್ಯೋತ್ಸವ ಹಾಗೂ ಸಂವಿಧಾನ ದಿನಾಚರಣೆ ಆಯೋಜಿಸಲಾಗಿತ್ತು. ಜೈ ಭೀಮ್ ಆಟೋ ಚಾಲಕರು ಮತ್ತು ಮಾಲೀಕರು ಸಂಘದ ಅಧ್ಯಕ್ಷ ಎಸ್.ಮಂಜು, ವರ್ತಕರ ಸಂಘದ ಅಧ್ಯಕ್ಷ ಗೋವಿಂದರಾಜು, ವೈದ್ಯರಾದ ಡಾ.ಶಶಿಕುಮಾರ್, ವೈದ್ಯ ಡಾ.ಮಹೇಶ್ ಇದ್ದರು. 
ಮೈಸೂರು

ಮಕ್ಕಳಲ್ಲಿ ಕನ್ನಡ ಭಾಷೆ ಬಳಕೆ ಕ್ಷೀಣ

ವೈದ್ಯ ಡಾ.ಮಹೇಶ್ ಆತಂಕ

ಎಚ್.ಡಿ.ಕೋಟೆ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದೆ ಎಂದು ವೈದ್ಯ ಡಾ.ಮಹೇಶ್ ಆತಂಕ ವ್ಯಕ್ತಪಡಿಸಿದರು.

ತಾಲೂಕಿನ ಅಂತರಸಂತೆ ಗ್ರಾಮದ ಜೈ ಭೀಮ್ ಆಟೋ ಚಾಲಕರು ಮತ್ತು ಮಾಲೀಕರು ಸಂಘದಿಂದ ಶುಕ್ರವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ಬರೆಯಲು, ಓದಲು, ಮಾತನಾಡಲು ಇರುವ ಅತ್ಯಂತ ಸುಂದರ ಭಾಷೆ ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳೂ ಕನ್ನಡ ಬರೆದರೆ ಕೈ ನೋವು ಬರುತ್ತದೆ ಎಂದು ಹೇಳುವುದನ್ನು ಕೇಳಿ ಬೇಸರವಾಗುತ್ತಿದೆ ಎಂದರು.

ಪಾಲಕರು ತಮ್ಮ ಮಕ್ಕಳು ಕನ್ನಡ ಮಾತನಾಡುವುದು, ಬರೆಯುವುದು ಹಾಗೂ ಸ್ಪಷ್ಟವಾಗಿ ಓದುವುದು, ಅರ್ಥ ಮಾಡಿಕೊಳ್ಳುವುದನ್ನು ಮೊದಲ ಆದ್ಯತೆಯಾಗಿ ಕಲಿಸಬೇಕು. ಕನ್ನಡ ಜಗತ್ತಿನಲ್ಲಿಯೇ ಅತ್ಯಂತ ಸುಂದರ ಭಾಷೆ ಹಾಗಾಗಿ ಕನ್ನಡಕ್ಕಾಗಿ ನಾವು ತನು-ಮನ ಅರ್ಪಿಸಬೇಕು ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಕಲೀಂ ಪಾಷ ಮಾತನಾಡಿ, ಆಟೋ ಚಾಲಕರ ಸಂಘದಿಂದ ಪ್ರತಿ ವರ್ಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ಇದೇ ವೇಳೆ ಸಂವಿಧಾನದ ಪೀಠಿಕೆ ಓದಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದ ಪೂರ್ವಿಕಾ ಮತ್ತು ಕೀರ್ತನಾ ಎಂಬ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಜೈ ಭೀಮ್ ಆಟೋ ಚಾಲಕರು ಮತ್ತು ಮಾಲೀಕರು ಸಂಘದ ಅಧ್ಯಕ್ಷ ಎಸ್.ಮಂಜು, ವರ್ತಕರ ಸಂಘದ ಅಧ್ಯಕ್ಷ ಗೋವಿಂದರಾಜು, ವೈದ್ಯ ಡಾ.ಶಶಿಕುಮಾರ್, ಸಂಘದ ಗೌರವ ಅಧ್ಯಕ್ಷ ಪ್ರಕಾಶ್ ಬುದ್ಧ, ಉಪಾಧ್ಯಕ್ಷ ರಂಗಸ್ವಾಮಿ, ಕಾರ್ಯದರ್ಶಿ ಮಹೇಶ್, ಸಂಘಟನಾ ಸಂಚಾಲಕ ಶಿವಕುಮಾರ್, ಸಹ ಕಾರ್ಯದರ್ಶಿ ಜವರಾಜು, ಖಜಾಂಚಿ ಎಸ್.ಕುಮಾರ್, ಉದ್ಯಮಿಗಳಾದ ರಘುರಾಮ್, ಶ್ರೀನಿವಾಸ (ಸ್ವಾಮಿ), ಡಾ.ಶ್ರವಣ್ ಕುಮಾರ್, ಸಿದ್ದೇಶ್ವರ್, ಕೆಂಪನಾಯಕ, ಮಂಜುನಾಥ, ಕಿರಣ್ ಕುಮಾರ್, ಮಹೇಶ್, ರಾಘವೇಂದ್ರ, ಸಂಘದ ಸದಸ್ಯರಾದ ನಂಜುಂಡಸ್ವಾಮಿ, ಮಹದೇವಸ್ವಾಮಿ, ಕೆ.ಸುರೇಶ್, ನಂಜಪ್ಪ, ನಾಗೇಂದ್ರ, ಮೋಹನ, ಬಾಲಕೃಷ್ಣ, ನಾಗರಾಜು, ಸಣ್ಣಮುದ್ದಯ್ಯ, ಆನಂದ್, ಅಜಯ್ ಇದ್ದರು.