ಹನಗೋಡು: ಪೌಷ್ಟಿಕ ಆಹಾರವೇ ಮಕ್ಕಳ ಉತ್ತಮ ಆರೋಗ್ಯ, ಶಿಕ್ಷಣ ಹಾಗೂ ಭವಿಷ್ಯಕ್ಕೆ ಬುನಾದಿ ಎಂದು ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಸೋಮಯ್ಯ ತಿಳಿಸಿದರು.
ಹನಗೋಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ, ಗರ್ಭಿಣಿಯರಿಗೆ ಸೀಮಂತ ಹಾಗೂ ಶಿಶುಗಳಿಗೆ ಕೈತುತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಹಕ್ಕೆ ಅಗತ್ಯವಿರುವ ಪ್ರೋಟೀನ್, ವಿಟಮಿನ್, ಖನಿಜಾಂಶ, ಕಬ್ಬಿಣಾಂಶ, ಕ್ಯಾಲ್ಸಿಯಂ ಸೇರಿದಂತೆ ಎಲ್ಲ ಪೌಷ್ಟಿಕಾಂಶಗಳನ್ನು ಸಮರ್ಪಕವಾಗಿ ಪಡೆಯುವುದು ಅಗತ್ಯ. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪೌಷ್ಟಿಕ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಮಕ್ಕಳು ಪ್ರತಿದಿನ ಹಸಿರು ಸೊಪ್ಪು, ತರಕಾರಿ, ಹಣ್ಣು, ಬೇಳೆ, ಕಾಳು, ಮೊಟ್ಟೆ, ಹಾಲು ಸೇರಿದಂತೆ ಪೌಷ್ಟಿಕ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಜಂಕ್‌ಫುಡ್, ಅತಿಯಾದ ಎಣ್ಣೆ ಹಾಗೂ ಸಕ್ಕರೆ ಇರುವ ಆಹಾರವನ್ನು ನಿಯಂತ್ರಿಸಬೇಕು. ಆಹಾರ ಸೇವಿಸುವ ಮೊದಲು ಹಾಗೂ ಶೌಚಗೃಹ ಬಳಸಿದ ನಂತರ ಸಾಬೂನಿನಿಂದ ಕೈ ತೊಳೆಯುವುದು, ಶುದ್ಧ ನೀರು ಕುಡಿಯುವುದು, ಪರಿಸರ ಸ್ವಚ್ಛತೆ ಕಾಪಾಡುವುದು ಹಾಗೂ ಪ್ರತಿದಿನ ಕ್ರೀಡೆ ಅಥವಾ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಆರೋಗ್ಯಕರ ಜೀವನಕ್ಕೆ ಅಗತ್ಯ ಎಂದು ಹೇಳಿದರು.
ಆರೋಗ್ಯ ಇಲಾಖೆಯ ಮೇಲ್ವಿಚಾರಕಿ ಸುಶೀಲಾ ಮಾತನಾಡಿ, ಪೋಷಣ್ ಮಾಸಾಚರಣೆ ಒಂದು ತಿಂಗಳಿಗೆ ಮಾತ್ರ ಸೀಮಿತವಾಗದೆ ವರ್ಷದ 365 ದಿನಗಳೂ ಆರೋಗ್ಯಕರ ಆಹಾರ ಮತ್ತು ಉತ್ತಮ ಜೀವನಶೈಲಿಯನ್ನು ಪಾಲಿಸುವ ಸಂಕಲ್ಪವಾಗಬೇಕು. ಮಕ್ಕಳಲ್ಲಿ ಆರೋಗ್ಯ ಮತ್ತು ಪೌಷ್ಟಿಕತೆಯ ಅರಿವು ಮೂಡಿಸುವಲ್ಲಿ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಪಾಲಕರು ಮನೆಯಲ್ಲಿಯೇ ಸಮತೋಲಿತ ಆಹಾರ ನೀಡುವ ಮೂಲಕ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಹಕರಿಸಬೇಕು ಎಂದರು.
ಸಭೆಯಲ್ಲಿ ಡಾ. ಹೇಮಂತ್ ಕುಮಾರ್, ಉಪಪ್ರಾಂಶುಪಾಲ ಸಂತೋಷ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾ.ರಾ. ಮಹೇಶ್, ಗ್ರಾಮದ ಮುಖಂಡ ಹನಗೋಡು ನಟರಾಜ್, ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನೇರಳಕುಪ್ಪೆ ಮಹದೇವ್, ಶಿಕ್ಷಕಿ ಛಾಯಾಮಣಿ, ಮೇಲ್ವಿಚಾರಕಿ ಸುಮಂಗಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಲೋಲಾ, ವಿದ್ಯಾವತಿ, ವೀಣಾ, ಆಶಾ, ವಿನೋದ, ಪೂರ್ಣಿಮಾ, ಚಂದ್ರಮ್ಮ, ರೇಖಾಮಣಿ ಹಾಗೂ ಆರೋಗ್ಯ ಇಲಾಖೆಯ ಪ್ರಭಾಕರ್, ಸರಸ್ವತಿ, ಕಾವೇರಿ ಇದ್ದರು.