ನಗರದ ದಸರಾ ವಸ್ತುಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ವಸ್ತುಪ್ರದರ್ಶನ ಮಳಿಗೆಯನ್ನು ಗುರುವಾರ ಸಂಜೆ ಉದ್ಘಾಟಿಸಲಾಯಿತು. ಎಂ.ರಾಮಪ್ಪ, ರಂಗಸ್ವಾಮಿ, ಶಿವಸ್ವಾಮಿ ಇನ್ನಿತರರಿದ್ದರು Inauguration of the Bhovi Corporation Exhibition Stall
ಮೈಸೂರು

ಭೋವಿ ನಿಗಮದ ವಸ್ತುಪ್ರದರ್ಶನ ಮಳಿಗೆ ಉದ್ಘಾಟನೆ

ಸಾರ್ವಜನಿಕರಿಗೆ ಮಾಹಿತಿಗಾಗಿ ಮಳಿಗೆ ಸ್ಥಾಪನೆ ನಿಗಮದ ಅಧ್ಯಕ್ಷ ಎಂ.ರಾಮಪ್ಪ ಹೇಳಿಕೆ

ಮೈಸೂರು: ನಗರದ ದಸರಾ ವಸ್ತುಪ್ರದರ್ಶನದಲ್ಲಿ ನಿರ್ಮಿಸಿರುವ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ವಸ್ತುಪ್ರದರ್ಶನ ಮಳಿಗೆಯನ್ನು ಗುರುವಾರ ಸಂಜೆ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಭೋವಿ ಸಮುದಾಯದ ಐತಿಹಾಸಿಕ ಹಿನ್ನೆಲೆ, ಕಲ್ಲು ಒಡೆಯುವ ಕೃತಿಗಳು, ಶೈಕ್ಷಣಿಕ ಪ್ರಗತಿ ಹಾಗೂ ನಿಗಮದಿಂದ ಜಾರಿಗೆ ಬಂದಿರುವ ವಿವಿಧ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಮಳಿಗೆ ರೂಪಿಸಲಾಗಿದೆ ಎಂದು ತಿಳಿಸಿದರು.

ಈ ಸಮುದಾಯದ ಇತಿಹಾಸ, ಶ್ರಮ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ದಸರಾ ಮಹೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಸ್ತಬ್ಧಚಿತ್ರವು ದಸರಾ ಉತ್ಸವಕ್ಕೆ ಮಾತ್ರ ಸೀಮಿತವಾಗದೆ, ಸಾರ್ವಜನಿಕರು ನಿರಂತರವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಇಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯಿಂದ ನಿಗಮಕ್ಕೆ ಬಂದಿರುವ 100 ಕೋಟಿ ರೂ. ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಸದ್ಭಳಕೆ ಮಾಡಿಕೊಳ್ಳಲಾಗುವುದು. ಸ್ವಾವಲಂಬಿ ಜೀವನಕ್ಕಾಗಿ ಕಾರು ವಿತರಣೆ, ಭೂ ರಹಿತ ಮಹಿಳೆಯರಿಗೆ ಭೂ ಒಡೆತನ, ಹೈನುಗಾರಿಕೆ, ಮನೆ ನಿರ್ಮಿಸಿಕೊಳ್ಳುವವರಿಗೆ ಸೆಂಟ್ರಿಂಗ್ ಸಾಮಗ್ರಿ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಕ್ವಾರಿ ಮುಚ್ಚುವ ಕುರಿತಾದ ಆತಂಕಗಳ ಬಗ್ಗೆ ತಾಂತ್ರಿಕ ವರದಿ ಪಡೆದು, ಯಾವುದೇ ಸಮಸ್ಯೆಯಾಗದಂತೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ನಿಗಮದ ಜನರಲ್ ಮ್ಯಾನೇಜರ್ ಶಿವಸ್ವಾಮಿ, ಜಿಲ್ಲಾ ವ್ಯವಸ್ಥಾಪಕಿ ಪ್ರೀತಿ ಚಿಕ್ಕಮಾದಯ್ಯ, ಕಚೇರಿ ಸಹಾಯಕಿ ಮಹಾಲಕ್ಷ್ಮೀ, ಕಮಾಡೆಂಟ್ ಜಯಸಿಂಹ, ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಯೂರು ವಿಜಯಕುಮಾರ್, ಡಿಸಿಸಿ ಉಪಾಧ್ಯಕ್ಷ ಮಹದೇವ್, ಕಾಳಪ್ಪ, ವಾಜಮಂಗಲ ರಮೇಶ್, ಮಧುಕಾರ್ಯ, ಮಹದೇವ್, ಸಿದ್ದು ಇನ್ನಿತರರು ಉಪಸ್ಥಿತರಿದ್ದರು.

ಆಯೋಜನೆ ಕುರಿತು ಹೈಕಮಾಂಡ್ ಕ್ರಮ

ಡಾ.ಎಚ್.ಸಿ.ಮಹದೇವಪ್ಪ ಹಾಗೂ ಸಿದ್ದರಾಮಯ್ಯ ನಡುವಿನ ವೈಮನಸ್ಸು ಹಾಗೂ ಒಂದೇ ದಿನ ಕಾರ್ಯಕ್ರಮ ಆಯೋಜನೆ ಕುರಿತು ಹೈಕಮಾಂಡ್ ಸಮಸ್ಯೆ ಬಗೆಹರಿಸಲಿದೆ ಎಂದು ಎಂ.ರಾಮಪ್ಪ ಹೇಳಿದರು.

ನ.26ರಂದು ಮಹದೇವಪ್ಪ ನೇತೃತ್ವದಲ್ಲಿ ರಾಷ್ಟ್ರೀಯ ಸಂವಿಧಾನ ಸಮ್ಮೇಳನ, ಸಿದ್ದರಾಮಯ್ಯ ಸೂಚನೆಯಂತೆ ಸರ್ಕಾರದಿಂದ ಅದೇ ದಿನ ಸಂವಿಧಾನ ದಿನ ಆಚರಣೆಗೆ ಮುಂದಾಗಿರುವ ಗೊಂದಲ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನಾವು ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ಇಬ್ಬರೂ ನಾಯಕರ ಮನಸ್ತಾಪ ಪಕ್ಷದ ಹೈಕಮಾಂಡ್ ಬಗೆಹರಿಸಲಿದೆ ಎಂದರು.