ಹುಣಸೂರು ತಾಲೂಕು ಮುಳ್ಳೂರು ಸರ್ಕಾರಿ ಶಾಲೆಯಲ್ಲಿ ಬಾ ಸೃಷ್ಟಿ ತಂಡದಿಂದ ಆಯೋಜಿಸಿದ್ದ ಲಲಿತ ಕಲಾ ಉಚಿತ ಶಿಬಿರದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸಿದರು. 
ಮೈಸೂರು

ಭಾವನೆಗಳ ಅಭಿವ್ಯಕ್ತಿ ಮಾಧ್ಯಮ ಲಲಿತಕಲೆ

ರಂಗಭೂಮಿ ಕಲಾವಿದ ವಿಜಯಕಾಂತ್ ಅಭಿಪ್ರಾಯ

ಹುಣಸೂರು: ಲಲಿತಕಲೆ ಎಂಬುದು ಕೇವಲ ಬಣ್ಣಗಳ ಆಟವಲ್ಲ. ಅದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಒಂದು ಸುಂದರ ಮಾಧ್ಯಮ ಎಂದು ರಂಗಭೂಮಿ ಕಲಾವಿದ ವಿಜಯಕಾಂತ್ ಅಭಿಪ್ರಾಯಪಟ್ಟರು.

ತಾಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಾ ಸೃಷ್ಟಿ ಮೈಸೂರು ತಂಡ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಮೂರು ದಿನಗಳ ಲಲಿತಕಲಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರಾಚೀನ ಕಾಲದಿಂದಲೂ ರಂಗಭೂಮಿಯಲ್ಲಿ ಹಾಸುಹೊಕ್ಕಾಗಿರುವ ಸಂಗೀತ, ಸಾಹಿತ್ಯ, ಕಾವ್ಯ, ನಟನೆ ಹಾಗೂ ಲಲಿತಕಲೆಗಳು ಮನುಷ್ಯನ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಪರದೆಗಳಿಗೆ ಅಂಟಿಕೊಂಡಿರುವ ಮಕ್ಕಳನ್ನು ಹೊರತಂದು, ಅವರಲ್ಲಿರುವ ಸುಪ್ತ ಪ್ರತಿಭೆ ಹಾಗೂ ಸೃಜನಶೀಲತೆ ಅನಾವರಣಗೊಳಿಸುವುದು ಇಂತಹ ಶಿಬಿರಗಳಿಂದ ಮಾತ್ರ ಸಾಧ್ಯ ಎಂದರು.

ಮಕ್ಕಳಿಗೆ ನಿಜವಾದ ಬದುಕಿನ ಕೌಶಲ್ಯಗಳನ್ನು ಕಲಿಸುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಶಿಬಿರದಲ್ಲಿ ವಿವಿಧ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಹೊಸ ಕೌಶಲಗಳ ಜೊತೆಗೆ ಏಕಾಗ್ರತೆ ಹೆಚ್ಚಾಗುತ್ತದೆ. ಸಂವಹನ ನಡೆಸುವ ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳುವ ಸಾಮಾನ್ಯ ಜ್ಞಾನ ಬೆಳೆಯುತ್ತದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರತರುವುದೇ ಶಿಬಿರದ ಮುಖ್ಯ ಆಶಯವಾಗಿದೆ ಎಂದರು.

ರಂಗಭೂಮಿ ಕಲಾವಿದ ತ್ಯಾಗರಾಜ ದೇವರಹಳ್ಳಿ, ಪೂಜಾ ಹಾಗೂ ಬಾ ಸೃಷ್ಟಿ ತಂಡದ ಕಾರ್ಯದರ್ಶಿ ಚೇತನ್ ಜಗತಪ್ ಉಪಸ್ಥಿತರಿದ್ದರು.