ಮಣ್ಣಿನಿಂದ ಕುಂತಿ ಪ್ರತಿಮೆ ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ ಸಲ್ಲಿಸುವ ಆಚರಣೆ. 
ಮೈಸೂರು

ಬೋಗನಹಳ್ಳಿಯಲ್ಲಿ ಕುಂತಿದೇವಿ ಪೂಜೆ

ಮಣ್ಣಿನಿಂದ ಕುಂತಿ ಪ್ರತಿಮೆ ಪ್ರತಿಷ್ಠಾಪಿಸಿ

ರಾವಂದೂರು: ಪಿರಿಯಾಪಟ್ಟಣ ತಾಲೂಕು ಭೋಗನಹಳ್ಳಿ ಗ್ರಾಮದಲ್ಲಿ ಕಾರ್ತಿಕ ಮಾಸದಂದು ಮಣ್ಣಿನಿಂದ ಕುಂತಿ ಪ್ರತಿಮೆ ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ ಸಲ್ಲಿಸುವ ಆಚರಣೆ ಹಮನ ಸೆಳೆಯಿತು.

ಕುಂತಿ ಪೂಜೆ ಎಂಬುದು ಜಾನಪದ ಆಚರಣೆಯಾಗಿದ್ದು, ಕಾರ್ತಿಕ ಮಾಸದಲ್ಲಿ ಆಚರಿಸುವ ವ್ರತವಾಗಿದೆ. ಮಹಿಳೆಯರು ಮನೆಯ ಮುಂಭಾಗ ಸಗಣಿಯಿಂದ ಸ್ವಚ್ಛಗೊಳಿಸುತ್ತಾರೆ. ನೆಲದಿಂದ ಸುಮಾರು ಒಂದು ಮೊಳ ಎತ್ತರದ ಹಿರೇಮಣ್ಣು ಅಥವಾ ಸಗಣೆಯಿಂದ ಕುದುರೆ ಏರಿಸಿಕೊಳ್ಳುವ ಆಕಾರದಲ್ಲಿ ಗುಡಿಸಿಲು ಪ್ರಕಾರವನ್ನು ಬಿಡಿಸಿ ಅದರೊಳಗೆ ಹಿರೇಮಣ್ಣಿನ ಸ್ತ್ರೀ ಪ್ರತಿಮೆ ಇಟ್ಟು ಪೂಜೆ ಸಲ್ಲಿಸುವುದು ಪೂಜೆಯ ವಿಶೇಷ. ಈ ವಿಗ್ರಹಕ್ಕೆ ಹುಚ್ಚೆಳ್ಳು ಹೂವು ಸೇರಿದಂತೆ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಿ, ವಿಶೇಷ ತಿಂಡಿ ತಿನಿಸುಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸುತ್ತಾರೆ. ಕಾರ್ತಿಕ ಮಾಸದಲ್ಲಿ ಜನರು ಕುಂತಿಮಾತೆಯನ್ನು ಇಷ್ಟದೇವತೆ ಎಂದು ನಂಬಿ ಮೊದಲ ಕಾರ್ತಿಕ ಮಾಸದಿಂದ ಹುಣ್ಣಿಮೆ ರಾತ್ರಿವರೆಗೂ 16 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದರಿಂದ ಕುಟುಂಬ ಹಾಗೂ ಗ್ರಾಮಕ್ಕೆ ಒಳ್ಳೆಯದಾಗಲಿದೆ ಎಂಬ ನಂಬಿಕೆ ಇದೆ. ಕುಂತಿದೇವಿ ಪ್ರತಿಮೆಯನ್ನು ಜಮೀನುಗಳಿಗೆ ತೆಗೆದುಕೊಂಡು ಹೋಗಿ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ.