ಬೈಲುಕುಪ್ಪೆ: ಬೈಲುಕುಪ್ಪೆ ಪೊಲೀಸ್ ಠಾಣೆಗೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಶುಕ್ರವಾರ ಭೇಟಿ ನೀಡಿ ಸಂಬಂಧಪಟ್ಟ ಕಡತಗಳನ್ನು ಪರಿಶೀಲಿಸಿದರು.
ನಂತರ ಪೊಲೀಸ್ ಠಾಣೆಯ ಸಿಬ್ಬಂದಿ ಅವರೊಂದಿಗೆ ಮಾತನಾಡಿದ ಅವರು, ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ವ್ಯವಸ್ಥೆ ಕಾಪಾಡುವುದು ನಿಮ್ಮೆಲ್ಲರ ಆದ್ಯ ಕರ್ತವ್ಯ. ಅಪರಾಧ ತಡೆಗಟ್ಟುವಿಕೆ, ಸಾರ್ವಜನಿಕರೊಂದಿಗೆ ಸ್ನೇಹಪೂರ್ವ ಸಂಪರ್ಕ, ನೊಂದ ಜನರು ಪೊಲೀಸ್ ಠಾಣೆಗೆ ಬಂದು ನೀಡಿದ ದೂರುಗಳನ್ನು ತ್ವರಿತವಾಗಿ ತನಿಖೆ ಮಾಡುವುದು ಮತ್ತು ಬೀಟ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಸೂಚಿಸಿದರು.
ಸಾರ್ವಜನಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸುವುದು, ಸಂಚಾರ ವ್ಯವಸ್ಥೆ ಸುಧಾರಣೆ, ಅಪರಾಧಗಳ ಮೇಲೆ ನಿಗಾ ವಹಿಸುವುದು ಹಾಗೂ ಶಾಂತಿ ಸುವ್ಯವಸ್ಥೆ ಬಗ್ಗೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗೆ ನಿರ್ದೇಶನ ನೀಡಿದರು.
ದೈನಂದಿನ ಚಟುವಟಿಕೆ ಪರಿಶೀಲಿಸಿದ ವೇಳೆ ಠಾಣೆಯ ಕಟ್ಟಡ ಶಿಥಿಲಾವಸ್ಥೆಗೊಂಡಿರುವ ಬಗ್ಗೆ ವಿವರಿಸಿದಾಗ ನೂತನ ಕಟ್ಟಡವನ್ನು ನಿರ್ಮಿಸಲು ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.
ಪೊಲೀಸ್ ಠಾಣೆಯಲ್ಲಿ 34 ಸಿಬ್ಬಂದಿ ಇದ್ದು, ಕೆಲಸ ನಿರ್ವಹಿಸಲು ಒತ್ತಡವಿರುವುದನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಸಿಬ್ಬಂದಿ ಕೊರತೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ವೃತ ನಿರೀಕ್ಷಕ ದೀಪಕ್, ಪೊಲೀಸ್ ಠಾಣೆಯ ಕ್ರೈಂ ಪಿಎಸ್‌ಐ ರವಿ, ಸಿಬ್ಬಂದಿ ಇದ್ದರು.