ಸಿ.ಶಿಖಾ Threat case: IAS officer C. Shikha records statement in court
ಮೈಸೂರು

ಬೆದರಿಕೆ ಪ್ರಕರಣ: ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಿದ ಐಎಎಸ್ ಅಧಿಕಾರಿ ಸಿ.ಶಿಖಾ

ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಸಿ.ಶಿಖಾ ಅವರಿಗೆ ನಿಂದಿಸಿ, ಧಮ್ಕಿ ಹಾಕಿದ ಪ್ರಕರಣ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ

ಮೈಸೂರು: ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿಯಾಗಿದ್ದ ಸಿ.ಶಿಖಾ ನಗರದ 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಶನಿವಾರ ಹಾಜರಾಗಿ ಆರೋಪಿಯನ್ನು ಗುರುತಿಸಿ ಸಾಕ್ಷಿ ನುಡಿದರು.

ಈ ಹಿಂದಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಸಿ.ಶಿಖಾ ಅವರಿಗೆ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಧಮ್ಕಿ ಹಾಕಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಐಎಎಸ್ ಅಧಿಕಾರಿ ಶಿಖಾ ಅವರು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾದರು. ಜತೆಗೆ, ಆರೋಪಿ ಕೆ.ಮರೀಗೌಡ ಅವರನ್ನು ನ್ಯಾಯಾಲಯದಲ್ಲೇ ಗುರುತಿಸಿ ಹೇಳಿಕೆ ದಾಖಲಿಸಿದರು.

ಮಧ್ಯಾಹ್ನ 12ರಿಂದ 2.30ರವರೆಗೆ ನಡೆದ ವಿಚಾರಣೆಯಲ್ಲಿ ಶಿಖಾ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘವಾಗಿ ತಮ್ಮ ಹೇಳಿಕೆ ದಾಖಲಿಸಿದರು. ವಿಚಾರಣೆ ವೇಳೆ ಪ್ರಕರಣದ ವಿಶೇಷ ಅಭಿಯೋಜಕರಾದ ಜಿ.ವಿ.ರಾಮಮೂರ್ತಿ, ಆರ್.ಗಿರಿಜೇಶ್, ರೋಹನ್ ವಿ ಗಂಗಾಡ್ಕರ್, ಆರೋಪಿ ಪರ ವಕೀಲರು ನ್ಯಾಯಾಲಯದಲ್ಲಿ ಹಾಜರಿದ್ದರು.

2016ರ ಜುಲೈ 3ರಂದು ನಗರದ ಸರ್ಕಾರಿ ಅತಿಥಿ ಗೃಹದ ಬಳಿ ನಡೆದಿದ್ದ ಘಟನೆಯನ್ನು ಆಧರಿಸಿ ನಜರ್‌ಬಾದ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ನ್ಯಾಯಮೂರ್ತಿ ನಾಗರಾಜ್ ಅವರು ಮುಂದೂಡಿದರು.