ಬೆಟ್ಟದಪುರ: ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ದಿನಾಚರಣೆ ಅಂಗವಾಗಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಎಸ್‌ಎಂಎಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ-1 ಮತ್ತು 2ರ ಸ್ವಯಂಸೇವಕರು ಇತಿಹಾಸ ಪ್ರಸಿದ್ಧ ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಬೆಟ್ಟದಲ್ಲಿ ಗುರುವಾರ ಶ್ರಮದಾನ ನಡೆಸಿದರು.
ಶ್ರೀ ಸಿಡಿಲು ಮಲ್ಲಿಕಾರ್ಜುನಸ್ವಾಮಿ ಹಾಗೂ ಶ್ರೀವೀರಭದ್ರೇಶ್ವರ ದೇವಾಲಯದ ಆವರಣದಲ್ಲಿದ್ದ ಗಿಡ ಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಯಿತು. ದೇವಾಲಯದ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ಬೆಳೆದಿದ್ದ ಅನಗತ್ಯ ಸಸ್ಯಗಳನ್ನು ತೆರವುಗೊಳಿಸುವುದರ ಜತೆಗೆ, ಬೆಟ್ಟದ ಆವರಣ ಹಾಗೂ ಮೆಟ್ಟಿಲುಗಳ ಮೇಲೆ ಬಿದ್ದಿದ್ದ ಪ್ಲಾಸ್ಟಿಕ್ ಸೇರಿದಂತೆ ಅನುಪಯುಕ್ತ ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಯಿತು.
ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ವಿ.ಮಂಜುನಾಥ್, ಪಾರಂಪರಿಕ ತಾಣಗಳ ಸಂರಕ್ಷಣೆ ಹಾಗೂ ಅವುಗಳನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಕರ್ತವ್ಯ. ಇತಿಹಾಸ ಪ್ರಸಿದ್ಧ ಶ್ರೀಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿ ಎನ್‌ಎಸ್‌ಎಸ್ ಸ್ವಯಂಸೇವಕರು ಶ್ರಮದಾನ ನಡೆಸುವ ಮೂಲಕ ಇಂದಿನ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸಿದ್ದಾರೆ ಎಂದರು.
ಕಾರ್ಯದರ್ಶಿ ಎ.ವಿ.ಛಾಯಾ, ಪ್ರಾಂಶುಪಾಲ ಎಸ್.ಕೆ.ರಾಜ, ಕಾರ್ಯಕ್ರಮಾಧಿಕಾರಿಗಳಾದ ಯಶವಂತ ಕುಮಾರ್, ಡಿ.ವಿ.ಸತೀಶ್, ಸಹ ಕಾರ್ಯಕ್ರಮಾಧಿಕಾರಿಗಳಾದ ಕುಬೇರ್, ಬಸವರಾಜು, ಉಪನ್ಯಾಸಕರಾದ ಹರ್ಷಿತಾ, ಶಿವಕುಮಾರ್, ವಸಂತ್, ಸುನಿಲ್, ಪ್ರತಾಪ್, ಅಕ್ಷತಾ, ಸ್ವಯಂಸೇವಕರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.