ಸರಗೂರು: ಕರ್ನಾಟಕ ಸಂತ ಶ್ರೇಷ್ಠರು, ಭವಿಷ್ಯದ ವಾಣಿ ನುಡಿವ ಅಜ್ಜಯ್ಯನೆಂದೇ ಖ್ಯಾತಿ ಪಡೆದಿರುವ ನೊಣವಿನಕೆರೆ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಅವರು ಪಟ್ಟಣದ ಬಿಸಿಎಂ ಸ್ವಾಮಿ ಮನೆಯಲ್ಲಿ ಇಷ್ಟಲಿಂಗ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಾದ ನೀಡಿದರು.
ಪಟ್ಟಣದ ಅರ್ಜುನಹಳ್ಳಿ ಲೇ.ಬಸಪ್ಪ ಅವರ ಧರ್ಮಪತ್ನಿ ಕೆಂಪಮ್ಮ ಅವರ ಮಕ್ಕಳಾದ ಬಿಸಿಎಂ ಸ್ವಾಮಿ ಅವರ ಮನೆಗೆ ಭೇಟಿ ನೀಡಿದ ಸ್ವಾಮೀಜಿ ಅವರು ಮೊದಲಿಗೆ ಪುರ ಪ್ರವೇಶ ಮಾಡಿದರು. ನಂತರ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ, ಜ್ಞಾನ ಜ್ಯೋತಿ, ಧ್ಯಾನ ಜ್ಯೋತಿ ಎಂಬ ಸಂದೇಶ ಸಾರಿದರು. ನಂತರ ಸಕಲ ಜೀವರಾಶಿಗಳಿಗೂ ಭಗವಂತ ಒಳ್ಳೆಯದು ಮಾಡಲಿ ಎಂದು ಆಶೀರ್ವಚನ ನೀಡಿದರು.
ಇದಕ್ಕೂ ಮುನ್ನ ಬಿಸಿಎಂ ಸ್ವಾಮಿ ಕುಟುಂಬದವರು ಶ್ರೀಗಳ ಪಾದಪೂಜೆ ಮಾಡಿದರು. ನಂತರ ಕುಟುಂಬಸ್ಥರು ತಾಲೂಕಿನ ಹಂಚೀಪುರ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ, ಪಡವಲು ವಿರಕ್ತ ಮಠದ ಶ್ರೀ ಮಹದೇವ ಸ್ವಾಮೀಜಿ, ಶ್ರೀ ಹುಲ್ಲಹಳ್ಳಿ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಮಳವಳ್ಳಿ ತಾಲೂಕು ಧನಗೂಡು ಮಠದ ಶ್ರೀ ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಸ್ವಾಮೀಜಿ, ನಂಜನಗೂಡು ತಾಲೂಕು ವಂದಲಗೆರೆ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಕಂಚಮಳ್ಳಿ ಪುರ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ, ಮಾದಾಪುರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಜಕ್ಕಳ್ಳಿ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಉಪಸ್ಥಿತರಿದ್ದು, ಶ್ರೀಗಳಿಂದ ಆಶೀರ್ವಾದ ಪಡೆದು ಪುನೀತರಾದರು.
ಇದೇ ಸಂದರ್ಬದಲ್ಲಿ ತಾಲೂಕಿನ ಶಾಸಕ ಅನಿಲ್ ಚಿಕ್ಕಮಾದು ವರ ಪತ್ನಿ ಸೌಮ್ಯಾ ಅನಿಲ್ ಚಿಕ್ಕಮಾದು ಅಜ್ಜಯ್ಯ ಅವರ ಆಶೀರ್ವಾದ ಪಡೆದರು.
ನಂತರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಚೇರಿಗೆ ಶ್ರೀಗಳು ಭೇಟಿ ನೀಡಿದರು. ಮಹಾಸಭಾದ ಪದಾಧಿಕಾರಿಗಳು, ಬಸವ ಬಳಗ, ಯುವ ಘಟಕ, ಮಹಿಳಾ ಘಟಕ, ಡಾ.ರಾಜೇಂದ್ರ ಶ್ರೀಗಳ ಭಕ್ತ ಬಳಗ, ವೀರಶೈವ ಸಮಾಜ, ವೀರಶೈವ ಸಹಕಾರ ಸಂಘ, ಶರಣ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಶರಣರು, ಶರಣೆಯರು ಹಾಜರಿದ್ದರು.