ಪಿರಿಯಾಪಟ್ಟಣ ಸಾರಿಗೆ ಬಸ್ ನಿಲ್ದಾಣಕ್ಕೆ ವಿಭಾಗೀಯ ಭದ್ರತಾ ಮತ್ತು ಜಾಗೃತ ಅಧಿಕಾರಿ ಎನ್.ರವೀಂದ್ರ ಭೇಟಿ ನೀಡಿ ಪರಿಶೀಲಿಸಿದರು. 
ಮೈಸೂರು

ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ

ಜಾಗೃತ ಅಧಿಕಾರಿ ಎನ್.ರವೀಂದ್ರ ಸಲಹೆ

ಪಿರಿಯಾಪಟ್ಟಣ: ಸಾರಿಗೆ ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡುವಂತೆ ವಿಭಾಗೀಯ ಭದ್ರತಾ ಮತ್ತು ಜಾಗೃತ ಅಧಿಕಾರಿ ಎನ್.ರವೀಂದ್ರ ಸೂಚಿಸಿದರು.

ಪಿರಿಯಾಪಟ್ಟಣದ ಸಾರಿಗೆ ಬಸ್ ನಿಲ್ದಾಣಕ್ಕೆ ಶನಿವಾರ ಅನಿರೀಕ್ಷ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಿ ಗಂಟೆಗೊಮ್ಮೆ ಕಸ ತೆರವುಗೊಳಿಸುವಂತೆ ಸ್ವಚ್ಛತಾ ಸಿಬ್ಬಂದಿಗೆ ತಿಳಿಸಬೇಕು. ಪ್ರಯಾಣಿಕರಿಗೆ ತೊಂದರೆಯಾಗದಂತೆ ಮಾರ್ಗಸೂಚಿಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಬೇಕು ಎಂದು ನಿಲ್ದಾಣದಲ್ಲಿದ್ದ ಸಂಚಾರ ನಿಯಂತ್ರಣ ಅಧಿಕಾರಿ ಗಣೇಶ್‌ಗೆ ಸೂಚಿಸಿದರು.

ಈ ವೇಳೆ ಬಸ್ ನಿಲ್ದಾಣದ ಆವರಣದಲ್ಲಿದ್ದ ಹೋಟೆಲ್‌ಗೆ ಭೇಟಿ ನೀಡಿ ಸೂಚನಾ ಫಲಕದಲ್ಲಿ ಅಳವಡಿಸಿದ್ದ ದರ ಪಟ್ಟಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಹೋಟೆಲ್ ಛಾವಣಿ ಶಿಥಿಲಗೊಂಡಿರುವುದನ್ನು ಗಮನಿಸಿ ದುರಸ್ತಿಗೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಬಳಿಕ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಅಲ್ಲಿದ್ದ ವಸ್ತುಗಳ ದರಪಟ್ಟಿ ಹಾಗೂ ಮಾರಾಟ ಮಾಡುತ್ತಿದ್ದ ದರ ಸರಿ ಇದೆಯೇ ಎಂದು ಪರಿಶೀಲಿಸಿ ಸ್ಥಳದಲ್ಲಿದ್ದ ಗ್ರಾಹಕರಿಂದ ಮಾಹಿತಿ ಪಡೆದು ಅಂಗಡಿಯಲ್ಲಿ ಮಾರಾಟ ಮಾಡುವ ಎಲ್ಲ ವಸ್ತುಗಳಿಗೂ ನಿಗದಿತ ದರಪಟ್ಟಿಯನ್ನೇ ಪಡೆಯಬೇಕು. ಅವಧಿ ಮುಗಿದ ವಸ್ತುಗಳ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು. ಶೌಚಗೃಹಕ್ಕೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿ ಅಲ್ಲಿದ್ದ ಸ್ವಚ್ಛತಾ ಸಿಬ್ಬಂದಿಗೆ ಗೋಡೆಯಲ್ಲಿ ಶೌಚಗೃಹ ಬಳಸಲು ನಿಗದಿತ ಮಾಡಿರುವ ದರ ಮುದ್ರಿಸುವಂತೆ ಸೂಚಿಸಿದರು.

ಇದೆ ವೇಳೆ ಬಸ್ ನಿಲ್ದಾಣದಲ್ಲಿ ಹಾಜರಿದ್ದ ನಿರ್ವಾಹಕರೊಂದಿಗೂ ಚರ್ಚೆ ನಡೆಸಿದರು. ನೌಕರ ಸುನೀಲ್, ಚಾಲಕ ಸಾಬಣ್ಣ ಇದ್ದರು