ತಿ.ನರಸೀಪುರ: ನಾಡಿನ ಸಾಂಸ್ಕೃತಿಕ ನಾಯಕ ಬಸವಣ್ಣ ಅವರನ್ನು ಕುರಿತು ಆಕ್ಷೇಪಾರ್ಹ ವಿಚಾರಗಳನ್ನು ಪ್ರಸ್ತಾಪಿಸಿರುವ ಬಸವ ಮಂಟಪ ಪುಸ್ತಕದ ಲೇಖಕ ಹಾಗೂ ಪ್ರಕಾಶಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಬಸವ ಅನುಯಾಯಿಗಳು ದೂರು ದಾಖಲಿಸಿದರು.
ಪಟ್ಟಣದ ವಿದ್ಯೋದಯ ಕಾಲೇಜು ವೃತ್ತದಲ್ಲಿ ಜಮಾವಣೆಗೊಂಡಿದ್ದ ವೀರಶೈವ ಲಿಂಗಾಯತ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಣ್ಣ ಅನುಯಾಯಿಗಳು ಪೊಲೀಸ್ ಠಾಣೆವರೆಗೆ ಜಾಥಾದಲ್ಲಿ ತೆರಳಿ ಇನ್ಸ್ಪೆಕ್ಟರ್ ಧನಂಜಯ್ ಅವರಿಗೆ ದೂರು ನೀಡಿದರು.
ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ.ಪ್ರಕಾಶ್ ಮಾತನಾಡಿ, ಬಸವ ಮಂಟಪ ಪುಸ್ತಕದ ಲೇಖಕ ರವಿ ಹಂಚ್ ಅವರು ಬಸವಣ್ಣನವರ ಕುರಿತಾಗಿ ನೀಡಿರುವ ಹೇಳಿಕೆಗಳು ಬಸವ ತತ್ವಾದರ್ಶಗಳಿಗೆ ವಿರುದ್ಧವಾಗಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇಂತಹ ಪ್ರವೃತ್ತಿಗೆ ಹೊರಾಟದ ಮೂಲಕವೇ ಕಡಿವಾಣ ಹಾಕಬೇಕು. ರಾಜ್ಯ ಸರ್ಕಾರ ಇಬ್ಬರ ವಿರುದ್ಧವೂ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಚಾರವಾದಿ ಕೆ.ಎನ್.ಪ್ರಭುಸ್ವಾಮಿ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ತೊಟ್ಟವಾಡಿ ರವಿ ಮಾತನಾಡಿದರು. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸೋಮಶೇಖರಪ್ಪ, ವೀರಶೈವ ಮಹಾಸಭಾದ ಉಪಾಧ್ಯಕ್ಷ ಎಸ್.ಕೆ.ಕಿರಣ್, ಕಾರ್ಯದರ್ಶಿ ಪರಮೇಶ್ ಪಟೇಲ್, ರಾಜ್ಯ ಸಮಿತಿ ಸದಸ್ಯ ಎನ್.ಲೋಕೇಶ್, ನಿರ್ದೇಶಕರಾದ ಕುಮಾರ್, ಕಾವೇರಿಪುರ ಮಲ್ಲು, ಕಟ್ಟೆಪುರ ಓಂಕಾರ್ ಸ್ವಾಮಿ, ಕುರುಬೂರು ಕು.ಸಿ.ಬೃಂಗೇಶ್, ತೋಂಟೇಶ, ಬಸವತತ್ವ ಪ್ರಚಾರಕ ಚೌವಳ್ಳಿ ಲಿಂಗರಾಜಪ್ಪ, ಮುಖಂಡರಾದ ಡಿ.ಎಲ್.ಮಹದೇವಪ್ಪ, ರಾಜಬುದ್ಧಿ, ಮುಗೂರು ಸಿದ್ದರಾಜು, ಉಮೇಶ್, ಕರೋಹಟ್ಟಿ ರಾಜಶೇಖರ್, ರವಿ, ಧರ್ಮಯ್ಯನಹುಂಡಿ ಕುಮಾರ್, ಕುರುಬೂರು ಮಂಜುನಾಥ್, ಹೆಳವರಹುಂಡಿ ಸತೀಶ್, ಬೆನಕನಹಳ್ಳಿ ರಾಜಶೇಖರ್, ಮಂಡ್ಯ ಶಿವಲೀಲಾ, ಬೋಗಯ್ಯನಹುಂಡಿ ಪ್ರಭುಸ್ವಾಮಿ ಇತರರು ಇದ್ದರು.