ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಕ್ಕಳ ರಂಗೋತ್ಸವದಲ್ಲಿ ಕೋಲ್ಕತದ ಪಾಂಡವಾನಿ ಕಲಾವಿದೆ ಸೀಮಾ ಘೋಷ್, ಎಸ್.ರಾಮನಾಥ್, ವೈ.ಎನ್.ರಾಜೇಶ್, ಸುಂದರೇಶ್ ದೇವಪ್ರಿಯಂ ಇದ್ದರು.  Theater that opens the dimension of life
ಮೈಸೂರು

ಬದುಕಿನ ಆಯಾಮ ತೆರೆದಿಡುವ ರಂಗಭೂಮಿ

ಕೋಲ್ಕತದ ಪಾಂಡವಾನಿ ಕಲಾವಿದೆ ಸೀಮಾ ಘೋಷ್ ಅನಿಸಿಕೆ ರಾಷ್ಟ್ರೀಯ ಮಕ್ಕಳ ರಂಗೋತ್ಸವಕ್ಕೆ ಚಾಲನೆ

ಮೈಸೂರು: ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಸೃಜನಶೀಲ ಉದ್ದೀಪನಗೊಳಿಸಲು ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ, ಜಗನ್ನಾಥ ಸೆಂಟರ್ ಫಾರ್ ಆರ್ಟ್ಸ್ ಆ್ಯಂಡ್ ಕಲ್ಚರ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿರುವ 8 ದಿನಗಳ ರಾಷ್ಟ್ರೀಯ ಮಕ್ಕಳ ರಂಗೋತ್ಸವಕ್ಕೆ ಭಾನುವಾರ ಸರಳವಾಗಿ ಚಾಲನೆ ದೊರೆಯಿತು.

ನಗರದ ಹಾರ್ಡ್ವಿಕ್ ಶಾಲಾವರಣದಲ್ಲಿರುವ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ ಕೋಲ್ಕತದ ಪಾಂಡವಾನಿ ಕಲಾವಿದೆ ಸೀಮಾ ಘೋಷ್ ಅವರು ನಾಟಕೋತ್ಸವವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಂಗಭೂಮಿ ವ್ಯಕ್ತಿಯ ಅಭಿವ್ಯಕ್ತಿ ಸಾಮರ್ಥ್ಯವನ್ನು ವಿಸ್ತರಿಸುವ ಮಹತ್ವದ ವೇದಿಕೆ. ಮನಸ್ಸಿನಲ್ಲಿರುವ ಭಾವನೆ ಮುಕ್ತವಾಗಿ ವ್ಯಕ್ತಪಡಿಸಲು, ಸಮಾಜದ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು, ಹೊಸ ಆಲೋಚನೆ ಜನರಿಗೆ ತಲುಪಿಸಲು ಇದು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.

ರಂಗಭೂಮಿ ವಿಸ್ತರಣೆಯಾಗುವುದು ಎಂದರೆ ಕೇವಲ ನಾಟಕಗಳ ಸಂಖ್ಯೆ ಹೆಚ್ಚಾಗುವುದಲ್ಲ, ಅಭಿವ್ಯಕ್ತಿಯ ಸ್ವಾತಂತ್ರ್ಯ, ಸಾಮಾಜಿಕ ಅರಿವು, ಸೃಜನಶೀಲ ಮನಸ್ಸುಗಳ ವಿಕಸನವಾಗುವುದಾಗಿದೆ. ಹೀಗಾಗಿ, ರಂಗಭೂಮಿ ಎಂಬುದು ಕೇವಲ ಮನರಂಜನೆಯ ಕಲೆಯಲ್ಲ,

ಅದು ಮನುಷ್ಯನ ಭಾವನೆ, ಆಲೋಚನೆ, ಅನುಭವ, ನೋವು, ನಲಿವು, ಸಾಮಾಜಿಕ ಚಿಂತನೆಯನ್ನು ಅಭಿವ್ಯಕ್ತಿಸುವ ಶಕ್ತಿಶಾಲಿ ಮಾಧ್ಯಮ. ಮಾತು, ಅಭಿನಯ, ಸಂಗೀತ, ನೃತ್ಯ, ಬೆಳಕು, ರಂಗಸಜ್ಜಿಕೆಯ ಮೂಲಕ ಬದುಕಿನ ವಿವಿಧ ಆಯಾಮಗಳನ್ನು ಪ್ರೇಕ್ಷಕರ ಮುಂದೆ ತೆರೆದಿಡುವ ಕಲಾಪ್ರಕಾರ ಎಂದು ವಿಶ್ಲೇಷಿಸಿದರು.

ರಂಗಕರ್ಮಿ ಎಸ್.ರಾಮನಾಥ್ ಮಾತನಾಡಿ, ರಂಗಶಿಕ್ಷಣದ ಕುರಿತು ಅದರ ಬೋಧಕರು, ರಂಗಕರ್ಮಿಗಳು, ಸಾರ್ವಜನಿಕರಿಗೂ ಅರಿವು ಇಲ್ಲ. ಕಥೆ, ಕಾದಂಬರಿಯನ್ನು ರಂಗಪಠ್ಯವಾಗಿ ರೂಪಿಸಿ, ಅದರ ರಂಗಪ್ರಯೋಗವೇ ರಂಗಶಿಕ್ಷಣ ಎಂದು ಬಹಳಷ್ಟು ತಿಳಿದುಕೊಂಡಿದ್ದಾರೆ. ಅದರಾಚಿನ ತಿಳವಳಿಕೆ ಕುರಿತು ಯಾರಿಗೂ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಂಗ ಶಿಕ್ಷಣ ಏನು, ಅದರಿಂದ ಏನು ಪ್ರಯೋಜನ, ಅದರ ಅಳವಡಿಕೆ ಕುರಿತು ಸರಿಯಾದ ಜ್ಞಾನವೇ ಇಲ್ಲವಾಗಿದೆ. ಶಾಲಾ ಆಡಳಿತ ಮಂಡಳಿಗೂ ಗೊತ್ತಿಲ್ಲ. ಹೀಗೆ ಮಾಡಬೇಕೆಂದು ರಂಗಶಿಕ್ಷಕರಿಗೆ ಸೂಚಿಸುವ ಮೂಲಕ ಮಿತಿ ಹೇರುತ್ತಿದ್ದಾರೆ. ಹೀಗಾಗಿ, ರಂಗಶಿಕ್ಷಣ ಕವಲುದಾರಿಯಲ್ಲಿ ಸಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮಕ್ಕಳ ನಾಟಕೋತ್ಸವ ಸಹ ಬೇಸಿಗೆ ಶಿಬಿರಕ್ಕೆ ಸೀಮಿತವಾಗಿದೆ. ನಾಲ್ಕೈದು ತಂಡಗಳನ್ನು ರಚಿಸಿ, ಅವರಿಗೆ ತರಬೇತಿ ನೀಡಿ ಒಂದು ದಿನ ಮಕ್ಕಳ ನಾಟಕ ಪ್ರದರ್ಶನವನ್ನೇ ರಂಗೋತ್ಸವ ಎಂಬಂತೆ ಬಿಂಬಿಸಲಾಗುತ್ತಿದೆ. ಈ ರೀತಿಯ ಕಸರತ್ತು ಒಂದು ದಿನಕ್ಕೆ ಸೀಮಿತವಾಗಬಾರದು. ಶಿಕ್ಷಣದೊಂದಿಗೆ ರಂಗಶಿಕ್ಷಣವನ್ನು ಬೋಧಿಸುವ, ತರಬೇತಿಗೊಳಿಸುವ, ಪ್ರದರ್ಶಸುವಂತಾಗಬೇಕು ಎಂದರು.

ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ವೈ.ಎನ್.ರಾಜೇಶ್, ಹಾರ್ಡ್ವಿಕ್ ಪಿಯು ಕಾಲೇಜಿನ ಪ್ರಾಂಶುಪಾಲ ಸುಂದರೇಶ್ ದೇವಪ್ರಿಯಂ, ರಂಗನಿರ್ದೇಶಕ ಪ್ರಸನ್ನ ಪಾಲ್ಗೊಂಡಿದ್ದರು.

ಸೀಮಾ ಘೋಷ್ ಅವರಿಂದ ಪಾಂಡವಾನಿ ಕಲೆ ಪ್ರದರ್ಶನಗೊಂಡಿತು. ‘ಪಾಂಡವಾನಿ: ಕಥೆ ಹೇಳುವ ಕಲೆ’ ಪುಸ್ತಕದ ಕುರಿತು ಸಂವಾದ ನಡೆಯಿತು.