ನಾಗಮಂಗಲ: ತಾಲೂಕಿನ ಕೋಟೆಬೆಟ್ಟ ಗ್ರಾಮದಲ್ಲಿ ಇತ್ತೀಚೆಗೆ ಚಿರತೆ ದಾಳಿಗೆ ಸಿಲುಕಿ 30 ಕುರಿಗಳು ಬಲಿಯಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಸಂತ್ರಸ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಗ್ರಾಮದ ವೆಂಕಟಲಕ್ಷ್ಮಮ್ಮ, ಮಂಜಮ್ಮ ಮತ್ತು ಭಾಗ್ಯಮ್ಮ ಅವರ ಒಟ್ಟು 60 ಕುರಿಗಳನ್ನು ಒಂದೇ ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಗಿತ್ತು. ನ.9ರಂದು ರಾತ್ರಿ ಕುರಿ ಕೊಟ್ಟಿಗೆಗೆ ನುಗ್ಗಿದ ಚಿರತೆಗಳು 30 ಕುರಿಗಳನ್ನು ಬಲಿ ಪಡೆದು 10 ಕುರಿಗಳನ್ನು ಗಂಭೀರವಾಗಿ ಗಾಯಗೊಳಿಸಿದ್ದವು. ಇದರಿಂದ ಕುರಿಗಾಹಿ ಬಡ ಕುಟುಂಬಕ್ಕೆ ಲಕ್ಷಾಂತರ ರೂ. ನಷ್ಟವಾಗಿತ್ತು.
ಸೋಮವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ಕೊಟ್ಟ ಸಚಿವರು, ಕುರಿ ಕೊಟ್ಟಿಗೆಯನ್ನು ಪರಿಶೀಲಿಸಿ ಕುರಿಗಾಹಿ ಸಂತ್ರಸ್ತ ಕುಟುಂಬಸ್ಥರಿಂದ ಅಗತ್ಯ ಮಾಹಿತಿ ಪಡೆದುಕೊಂಡರು. ನಂತರ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಚಿರತೆ ದಾಳಿಗೆ ಬಲಿಯಾಗಿರುವ ಕುರಿಗಳಿಗೆ ತಲಾ 7,500 ರೂ.ನಂತೆ ಶೀಘ್ರದಲ್ಲಿ ಪರಿಹಾರ ನೀಡುವಂತೆ ಸೂಚಿಸಿದರು. ಈ ವೇಳೆ ತಾಲೂಕಿನ ಚಿಕ್ಕವೀರನಕೊಪ್ಪಲು ಗ್ರಾಮದ ಕ್ರಷರ್ ಕರೀಗೌಡ ಅವರು ಕುರಿಗಾಹಿ ಸಂತ್ರಸ್ತ ಕುಟುಂಬಸ್ಥರಿಗೆ ವೈಯಕ್ತಿಕವಾಗಿ 15 ಸಾವಿರ ರೂ.ಗಳ ಚೆಕ್ ನೀಡಿದರು.
ನಂತರ ತಾಲೂಕಿನ ದೊಂದೆಮಾದಹಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟ ಸಚಿವರು, ಇತ್ತೀಚೆಗೆ ಪಟ್ಟಣದಲ್ಲಿ ಶ್ರೀ ಕೋಟೆ ವಿದ್ಯಾಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಕುಸಿದು ಬಿದ್ದು ಸಾವಿಗೀಡಾದ ಗಿರೀಶ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದರು.
ಮೈಶುಗರ್ಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಬಿ.ಎನ್.ವನರಾಜ್, ಸಿಂಗಾರಿಗೌಡ, ಡಿ.ಟಿ.ಕೃಷ್ಣೇಗೌಡ, ನರಸಿಂಹಮೂರ್ತಿ, ಕೆಂಚೇಗೌಡನಕೊಪ್ಪಲು ಶ್ರೀನಿವಾಸ್, ಹಾಲ್ತಿ ಗಿರೀಶ್, ತಮ್ಮಣ್ಣಗೌಡ, ಪ್ರವೀಣ್ಕುಮಾರ್ ಇತರರು ಇದ್ದರು.