ಹುಣಸೂರು ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಸಿದ್ದ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಗೆ ಸಹಕಾರ ನೀಡಿದ ಕಾಡಂಚಿನ ಗ್ರಾಮದ ಮುಖಂಡರನ್ನು ಸನ್ಮಾನಿಸಲಾಯಿತು. ಎಸಿಎಫ್ ಲಕ್ಷ್ಮೀಕಾಂತ್, ಆರ್‌ಎಫ್‌ಒ ಜಿ.ಮಂಜು, ವಿದ್ಯಾಶ್ರೀ, ಶಿವಕುಮಾರ್, ಕೆ.ಡಿ.ಮಧು, ಶರಣಪ್ಪ, ಪೃಥ್ವಿ ಇತರರಿದ್ದರು. 
ಮೈಸೂರು

ಪ್ರಸ್ತುತ ಅರಣ್ಯ ಪ್ರದೇಶ ಶೇ.19ಕ್ಕೆ ಇಳಿಕೆ

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಕಳವಳ

ಹುಣಸೂರು: ಪರಿಸರ ಅಸಮತೋಲದಿಂದ ಆಗುತ್ತಿರುವ ಅನಾಹುತಗಳನ್ನು ವಿದ್ಯಾರ್ಥಿಗಳು ಅರಿತು ಭವಿಷ್ಯದ ಸುಂದರ ಪರಿಸರಕ್ಕಾಗಿ ಹೆಜ್ಜೆಯಿಡಬೇಕು ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೀಕಾಂತ್ ಹೇಳಿದರು.

ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಇಕೋ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಕಾಲೇಜಿನೆಡೆಗೆ ಅರಣ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭೂಮಂಡಲದಲ್ಲಿ ಎಲ್ಲ ಜೀವಿಗಳ ಬದುಕಿಗೆ ಕಂಟಕವಾಗಿದೆ. ಭೂಮಿಯ ಮೇಲೆ ಶೇ.33 ಇರಬೇಕಿದ್ದ ಅರಣ್ಯ ಪ್ರದೇಶ ಕೇವಲ ಶೇ.18-19ಕ್ಕೆ ಇಳಿದಿದೆ. ತಾಪಮಾನ ಏರಿಕೆ, ಹವಾಮಾನ ವೈಪರೀತ್ಯಗಳ ಪರಿಣಾಮಗಳನ್ನು ಈಗಾಗಲೇ ಕಾಣುತ್ತಿದ್ದೇವೆ. 845 ಚದರ ಕಿ.ಮೀ.ವಿಶಾಲ ವಿಸ್ತೀರ್ಣ ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಬಾರಿ ನೀರಿನ ಕೊರತೆ ಕಾಡುತ್ತಿದ್ದು, ವನ್ಯಜೀವಿಗಳು ಜೀವಜಲಕ್ಕಾಗಿ ಪರಿತಪಿಸುವಂತಾಗಿದೆ. ಪರಿಸರ ಸಂರಕ್ಷಣೆ ಎನ್ನುವುದು ಕೇವಲ ಅರಣ್ಯ ಇಲಾಖೆ ಜವಾಬ್ದಾರಿ ಮಾತ್ರವಲ್ಲ. ಸಮುದಾಯದ ಸಹಭಾಗಿತ್ವವಿದ್ದಲ್ಲಿ ಮಾತ್ರ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.

ಮಾನವ-ವನ್ಯಜೀವಿ ಸಂಘರ್ಷದ ಘಟನೆಗಳನ್ನು ವಿದ್ಯಾರ್ಥಿಗಳಾಗಿ ನೀವು ನಿಮ್ಮ ಊರಿನಲ್ಲಿ ಕಂಡಿರಬಹುದು. ಪ್ರಾಣಿಗಳು ಸಹಜವಾಗಿ ಸಂಚರಿಸುವ ಪ್ರದೇಶವನ್ನು ಮನುಷ್ಯ ಅತಿಕ್ರಮಿಸಿಕೊಂಡಿರುವುದೇ ಸಂಘರ್ಷಕ್ಕೆ ಮೂಲ ಕಾರಣ. ಇಂತಹ ಸಂದರ್ಭದಲ್ಲಿ ಗ್ರಾಮಸ್ಥರಿಗೆ ವನ್ಯಜೀವಿಗಳಿಗೆ ತೊಂದರೆ ನೀಡದಂತೆ ಹೇಳಿ. ಪ್ರಾಣಿಗಳು ತಮ್ಮ ಪಾಡಿಗೆ ಕಾಡು ಸೇರಿಕೊಳ್ಳುತ್ತವೆ ಎಂದರು.

ಆರ್‌ಎಫ್‌ಒ ಜಿ.ಮಂಜು ಮಾತನಾಡಿ, ಸಹಬಾಳ್ವೆ, ಸಾಮರಸ್ಯ ಜೀವನ, ನಾಗರಿಕರ ಪಾಲ್ಗೊಳ್ಳುವಿಕೆ, ಪ್ರಕೃತಿಯತ್ತ ನಡಿಗೆ ಮುಂತಾದ ಕಾರ್ಯಕ್ರಮಗಳ ಮೂಲಕ ನಾಗರಿಕರಲ್ಲಿ ಪರಿಸರ ಮಹತ್ವ ಕುರಿತು ಅರಿವು ಮೂಡಿಸುವ ಕಾರ್ಯ ನಡೆಸಲಾಗಿದೆ ಎಂದರು.

ಇದೇ ವೇಳೆ ಕಾಡಂಚಿನ ಗ್ರಾಮಗಳಲ್ಲಿ ವಿವಿಧ ಸಂದರ್ಭದಲ್ಲಿ ಅರಣ್ಯ ಇಲಾಖೆಯೊಂದಿಗೆ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ ನೀಡಿದ ಪಿರಿಯಾಪಟ್ಟಣದ ರವಿಚಂದ್ರ, ಪ್ರಸನ್ನ, ಆರ್.ಮೋಹನ್ ಮತ್ತು ಹುಣಸೂರು ತಾಲೂಕು ನೇರಳಕುಪ್ಪೆ ಗ್ರಾಮದ ಶಿವಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಪ್ರಾಂಶುಪಾಲ ಡಾ.ಸ್ವಾಮಿ, ಇಕೋ ಕ್ಲಬ್ ಸಂಚಾಲಕ ಪಿ.ಸಂತೋಷ್, ಪ್ರಾಧ್ಯಾಪಕರಾದ ಪ್ರಕಾಶ್, ದೊಡ್ಡೇಗೌಡ, ಆರ್‌ಎಫ್‌ಒ ವಿದ್ಯಾಶ್ರೀ, ಡಿಆರ್‌ಎಫ್‌ಒ ಶಿವಕುಮಾರ್, ಗೋಪಿ, ಗಸ್ತು ಅರಣ್ಯ ಪಾಲಕರಾದ ಪೃಥ್ವಿ, ಶರಣಪ್ಪ, ಕೆ.ಡಿ.ಮಧು ಹಾಜರಿದ್ದರು.