ಮಾಜಿ ಶಾಸಕ ಕೆ.ಮಹದೇವ್ 
ಮೈಸೂರು

ಪ್ರಸನ್ನಗೆ ಪಕ್ಷದ ಶಿಸ್ತು ಉಲ್ಲಂಘನೆ ನೋಟಿಸ್

ಮಾಜಿ ಶಾಸಕ ಕೆ.ಮಹದೇವ್ ಮಾಹಿತಿ

ಪಿರಿಯಾಪಟ್ಟಣ: ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಜೆಡಿಎಸ್ ಪಕ್ಷದ ಅನುಮತಿ ಇಲ್ಲದೆ ಪಾದಯಾತ್ರೆ ಮಾಡುವ ಮೂಲಕ ಪಕ್ಷದ ಶಿಸ್ತು ಉಲ್ಲಂಘಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ನೋಟಿಸ್ ನೀಡಲಾಗುತ್ತಿದೆ ಎಂದು ಮಾಜಿ ಶಾಸಕ ಕೆ.ಮಹದೇವ್ ತಿಳಿಸಿದರು.

ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ, ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಅಶ್ವಿನ್ ಕುಮಾರ್, ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಸೇರಿದಂತೆ ಯಾವ ನಾಯಕರ ಅನುಮತಿ ಪಡೆಯದೆ ಪಾದಯಾತ್ರೆ ನಡೆಸುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲವನ್ನುಂಟು ಮಾಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಕಾರ್ಯಕ್ರಮ ಆಯೋಜಿಸದಂತೆ ತಾಲೂಕು ಅಧ್ಯಕ್ಷ ಅಣ್ಣಯ್ಯ ಶೆಟ್ಟಿ ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದರು. ಅವರ ಮಾತು ಮೀರಿ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಪಕ್ಷದ ಕಾರ್ಯಕರ್ತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಬರುತ್ತಿದ್ದಾರೆ ಎಂದು ನಂಬಿಸಿ ಜೆಡಿಎಸ್ ಕಾರ್ಯಕರ್ತರನ್ನು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ ಎಂದು ದೂರಿದರು.

ಮೈಮುಲ್ ಮಾಜಿ ಅಧ್ಯಕ್ಷರಾಗಿದ್ದರೂ ಜೆಡಿಎಸ್ ಪಕ್ಷದಲ್ಲಿ ಯಾವುದೇ ಹುದ್ದೆಯಲ್ಲಿ ಇಲ್ಲ. ಅವರು ನಮ್ಮ ಪಕ್ಷದ ಚಿಹ್ನೆಯಿಂದ ಮೈಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರಲಿಲ್ಲ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಿರಿಯಾಪಟ್ಟಣಕ್ಕೆ ಬಂದು ಪ್ರಸನ್ನ ಅವರಿಗೆ ಮತ ನೀಡಬೇಡಿ ಎಂದಿದ್ದರು. ತನ್ನ ವೈಯಕ್ತಿಕ ವರ್ಚಸ್ಸಿನಿಂದ ಗೆಲುವು ಸಾಧಿಸಿರಲಿಲ್ಲ. ನನ್ನ ಪರಿಶ್ರಮದಿಂದ ಗೆದ್ದಿದ್ದರು. ಜಿಲ್ಲಾಧ್ಯಕ್ಷ ಅಶ್ವಿನ್ ಕುಮಾರ್ ನಿರ್ದೇಶನದ ಮೇರೆಗೆ ಶಿಸ್ತು ಕ್ರಮದ ನೋಟಿಸ್ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಪಕ್ಷದ ಆಂತರಿಕ ಶಿಸ್ತು ಸಮಿತಿ ಅಧ್ಯಕ್ಷ ಜೆ.ಎಸ್.ನಾಗರಾಜ್ ಮಾತನಾಡಿ ಪಿ.ಎಂ.ಪ್ರಸನ್ನ ಕಾರ್ಯಕರ್ತರಲ್ಲಿ ಗೊಂದಲ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಲುವಾಗಿ 9 ಪ್ರಶ್ನೆಗಳಿಗೆ 7ದಿನದೊಳಗೆ ಉತ್ತರಿಸುವಂತೆ ನೋಟಿಸ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಶಿಸ್ತು ಸಮಿತಿ ಗೌರವಾಧ್ಯಕ್ಷ ಗೋವಿಂದಗೌಡ, ಸದಸ್ಯರಾದ ಮಂಜುನಾತ್ ಸಿಂಗ್, ಬಿ.ಜಿ.ಸತೀಶ್, ತಿಮ್ಮನಾಯಕ, ಮಂಜುನಾಥ್, ರಾಜೇಶ್, ರಾಜು, ಸೋಮಶೇಖರ್ ಹಾಜರಿದ್ದರು.

ಮತ್ತೆ ಕುಟುಂಬ ಕಲಹ ಬಹಿರಂಗ

ಮಾಜಿ ಶಾಸಕ ಕೆ.ಮಹದೇವ್ ಮತ್ತು ಪುತ್ರ ಪಿ.ಎಂ.ಪ್ರಸನ್ನ ಅವರ ನಡುವಿನ ಕೌಟುಂಬಿಕ ಕಲಹ ಪ್ರಸನ್ನ ಅವರನ್ನು ಪಕ್ಷದಿಂದ ಹೊರಹಾಕಲು ನೋಟಿಸ್ ನೀಡುವ ಹಂತಕ್ಕೆ ಬಂದು ತಲುಪಿದೆ. ಒಮ್ಮೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಂಧಾನವಾದರೂ ವೈಮನಸ್ಸು ಮುಂದುವರಿದಿದೆ.

ಪಾದಯಾತ್ರೆಯಲ್ಲಿ ಪಾಲ್ಗೊಳ್ಳದಂತೆ ಖುದ್ದು ಮಾಜಿ ಶಾಸಕ ಕೆ.ಮಹದೇವ್, ಮುಖಂಡರು ಮತ್ತು ಕಾರ್ಯಕರ್ತರಿಗೆ ತಿಳಿಸಿದ್ದರು. ಆದರೂ ಕಾರ್ಯಕರ್ತರು ಭಾಗವಹಿಸಿದ್ದು ಕೆ.ಮಹದೇವ್ ಅವರನ್ನು ಸಹಜವಾಗಿ ಕೆರಳಿಸಿದೆ.