ಪಿರಿಯಾಪಟ್ಟಣ: ಸಫಾಯಿ ಕರ್ಮಚಾರಿ ಆಯೋಗವು ಕಟ್ಟುನಿಟ್ಟಿನ ಕಾನೂನು ಅನುಸರಿಸುವ ಮೂಲಕ ಪೌರಕಾರ್ಮಿಕರ ಹಿತ ಕಾಪಾಡುತ್ತಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ರಾಜ್ಯ ಸಮಿತಿ ಸದಸ್ಯ ಸಿ.ಶಂಕರ್ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಪೌರಕಾರ್ಮಿಕರಿಗೆ ತೊಂದರೆಯಾದಲ್ಲಿ ಆಯೋಗವು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಪೌರಕಾರ್ಮಿಕರು ಸರ್ಕಾರದಿಂದ ದೊರಕುವ ಸವಲತ್ತುಗಳ ಬಗ್ಗೆ ಮಾಹಿತಿ ಹೊಂದಿರಬೇಕು. ಸರ್ಕಾರವು ಪೌರಕಾರ್ಮಿಕರ ಪರವಾಗಿದ್ದು ಅವರ ಹಿತ ಬಯಸುತ್ತದೆ. ಅವರಿಗೆ ದೊರಕಬೇಕಾದ ಸವಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡುತ್ತದೆ ಎಂದರು.
ಪೌರಕಾರ್ಮಿಕ ಸಂಘದ ಅಧ್ಯಕ್ಷ ಕೆ.ಶ್ರೀನಿವಾಸ್ ಮಾತನಾಡಿ, ಪುರಸಭೆಯಲ್ಲಿ ಕೆಲವು ಪೌರಕಾರ್ಮಿಕರಿಗೆ ಕಾಯಂ ನೇಮಕವಾಗಿದ್ದರೂ ನಿಗದಿತ ಸಮಯಕ್ಕೆ ವೇತನ ದೊರೆಯುತ್ತಿಲ್ಲ ಎಂದು ದೂರಿದರು. ಚನ್ನಕೇಶವ ಮಾತನಾಡಿ ಪುರಸಭೆಯಿಂದ ನೀಡುವ ಬೆಳಗಿನ ಉಪಾಹಾರದ ವ್ಯವಸ್ಥೆ ಬದಲಾಗಬೇಕು. ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಸ್ವಚ್ಛತಾ ನೌಕರ ವಿಜಯ್ ಕುಮಾರ್ ಮಾತನಾಡಿ, ತಂಬಾಕು ಹರಾಜು ಮಾರುಕಟ್ಟೆಯಲ್ಲಿ ನಾನು ಹಲವು ವರ್ಷಗಳಿಂದ ಸ್ವಚ್ಛತಾ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದೆ. ಆದರೆ, ಹರಾಜು ಅಧೀಕ್ಷಕರು ನನ್ನನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಇಎಸ್‌ಐ ಮತ್ತು ಪಿಎಫ್ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು. ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಸೆಲ್ವಿ ಮಾತನಾಡಿ, ನನಗೆ ಕನಿಷ್ಠ ವೇತನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ ಜೀವನ ಭದ್ರತೆಗೆ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಸ್ವಚ್ಛತಾ ನೌಕರ ಲವ ಮಾತನಾಡಿ, ಪಂಚಾಯಿತಿಯಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚಾಗಿ ದುಡಿಸಿಕೊಳ್ಳುತ್ತಿದ್ದಾರೆ. ಕನಿಷ್ಠ ವೇತನ ಸೌಲಭ್ಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಭಾಗವಹಿಸಿದ್ದ ಕಾರ್ಮಿಕರ ಕುಂದುಕೊರತೆಗಳನ್ನು ಆಲಿಸಿದ ಸಿ.ಶಂಕರ್ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಉಪ ತಹಸೀಲ್ದಾರ್ ಶ್ರೀನಿವಾಸ್, ತಾ.ಪಂ ಇಒ ಸುನಿಲ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಚ್.ಪಿ.ಮಧು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್, ಜಿಲ್ಲಾ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ರಾಜೇಂದ್ರ, ಮಾಜಿ ಸದಸ್ಯ ಎಚ್.ಕೆ.ಮಹೇಶ್, ಇಎಸ್‌ಐ, ಪಿಎಫ್ ವಿಭಾಗದ ಸಿಬ್ಬಂದಿ ದೀಪಕ್, ರವಿ ನಂದನ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸದಸ್ಯ ಮುತ್ತುರಾಜ್ ಇತರರಿದ್ದರು.