ಹುಣಸೂರು ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ತಮ್ಮ ಜಮೀನಿಗೆ ತೆರಳಲು ದಾರಿ ಮಾಡಿಕೊಡಬೇಕೆಂದು ಬಾಧಿತ ಮಹಿಳೆ ಜಾನಕಮ್ಮ ಸಭೆಗೆ ಆಗಮಿಸಿ ಉಪ ವಿಭಾಗಾಧಿಕಾರಿಗೆ ಕೋರಿದರು. ಸದಸ್ಯರಾದ ಲಕ್ಷ್ಮಣ್, ನಾಗವೇಣಿ ಇತರರಿದ್ದರು. 
ಮೈಸೂರು

ಪೌರಕಾರ್ಮಿಕರ ವಸತಿ ಗೃಹಕ್ಕಾಗಿ ಜಾಗ ಗುರುತಿಸಿ

ಅಧಿಕಾರಿಗಳಿಗೆ ಉಪ ವಿಭಾಗಾಧಿಕಾರಿ ಜಿ.ಡಿ.ಶೇಖರ್ ಸೂಚನೆ

ಹುಣಸೂರು: ನಗರಸಭೆಯ ಪೌರಕಾರ್ಮಿಕರ ಜೀವನಮಟ್ಟ ಸುಧಾರಿಸುವ ಮತ್ತು ಸ್ವಚ್ಛತಾ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಸರ್ಕಾರದ ನಿರ್ದೇಶನದಂತೆ ನಗರವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ವಸತಿ ಗೃಹ ನಿರ್ಮಿಸಿಕೊಡಲು 2 ಎಕರೆ ಭೂಮಿ ಗುರುತಿಸಬೇಕೆಂದು ಉಪ ವಿಭಾಗಾಧಿಕಾರಿ ಜಿ.ಡಿ.ಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ನಗರದ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಣದಲ್ಲಿ ಆಯೋಜಿಸಿದ್ದ ಉಪ ವಿಭಾಗ ಮಟ್ಟದ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

2026ರ ಸೆಪ್ಟೆಂಬರ್‌ನಲ್ಲಿ ಪೌರಾಡಳಿತ ನಿರ್ದೇಶನಾಲಯ ರಾಜ್ಯಾದ್ಯಂತ ಸ್ಥಳೀಯ ಸಂಸ್ಥಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಅನುಕೂಲಕ್ಕಾಗಿ ಸರ್ಕಾರದ ವತಿಯಿಂದ ಬಡಾವಣೆಗಳನ್ನು ನಿರ್ಮಿಸಿ ಉಚಿತ ನಿವೇಶನಗಳನ್ನು ನೀಡಲು ಯೋಜನೆ ರೂಪಿಸಿದ್ದು, ಅದರಂತೆ ಹುಣಸೂರು ಉಪ ವಿಭಾಗ ವ್ಯಾಪ್ತಿಯ ಎಲ್ಲ ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳು ನಗರವ್ಯಾಪ್ತಿಯಲ್ಲಾದರೆ 2 ಎಕರೆ ಮತ್ತು ನಗರ ಅಥವಾ ಪಟ್ಟಣ ಹೊರವಲಯ ವ್ಯಾಪ್ತಿಯಲ್ಲಾದರೆ 5 ಎಕರೆ ಭೂಮಿಯನ್ನು ಗುರುತಿಸಿ ಕಾಯ್ದಿರಿಸಲು ಸೂಚಿಸಿದೆ. ಅದರಂತೆ ಅಧಿಕಾರಿಗಳು ವಿಳಂಬ ಮಾಡದೇ ಭೂಮಿ ಗುರುತಿಸಿ ಮಾಹಿತಿ ರವಾನಿಸಬೇಕು ಎಂದು ಸೂಚಿಸಿದರು.

ಹುಣಸೂರಿನಲ್ಲಿ ಮುಗಿಯದ ಸಮಸ್ಯೆ: ಸಮಿತಿ ಸದಸ್ಯ ಕೆ.ಲಕ್ಷ್ಮಣ್ ಮಾತನಾಡಿ, ಹುಣಸೂರು ನಗರಸಭೆ ಕಳದ 5 ವರ್ಷಗಳಿಂದ ಭೂಮಿ ಗುರುತಿಸುವ ಕಾರ್ಯವನ್ನು ಮುಂದುವರಿಸುತ್ತಲೇ ಇದೆಯೇ ಹೊರತು ತಾರ್ಕಿಕ ಅಂತ್ಯ ಕಾಣಿಸುತ್ತಿಲ್ಲ. ನಗರೋತ್ಥಾನ ಯೋಜನೆಯಡಿ 95 ಲಕ್ಷ ರೂ.ಅನುದಾನವನ್ನೂ ಮೀಸಲಿಡಲಾಗಿದೆ. ನಗರಸಭೆಯಲ್ಲಿ 115 ಪೌರಕಾರ್ಮಿಕರು ದುಡಿಯುತ್ತಿದ್ದು, ಅತ್ಯಂತ ದುಸ್ತಿತಿಯಲ್ಲಿ ಕುಟುಂಬಗಳು ಬದುಕುತ್ತಿವೆ. ಈಗಲಾದರೂ ಸಮಸ್ಯೆಯನ್ನು ಬಗೆಹರಿಸಿ ಬಡಾವಣೆಗಳನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದರು.

ರಸ್ತೆಗಾಗಿ ಅವಲತ್ತುಕೊಂಡ ಜಾನಕಮ್ಮ: ಜಮೀನಿಗೆ ಹೋಗಲು ರಸ್ತೆ ಮಾಡಿಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ ಎಂದು ಮಹಿಳೆಯೊಬ್ಬರು ಸಭೆಯಲ್ಲಿ ಅವಲತ್ತುಕೊಂಡ ಘಟನೆ ಗಮನಸೆಳೆಯಿತು. ಹುಣಸೂರು ತಾಲೂಕಿನ ಭರತವಾಡಿ ಗ್ರಾಮದ ಮ್ಯಾನುಯಲ್ ಸ್ಕ್ಯಾವೆಂಜರ್ ಜಾನಕಮ್ಮ, ಜಮೀನಿಗೆ ಹೋಗಲು ಅಕ್ಕಪಕ್ಕದ ಜನರು ದಾರಿ ಕೊಡುತ್ತಿಲ್ಲ. ಇದರಿಂದ ತೊಂದರೆಗೆ ಸಿಲುಕಿದ್ದೇನೆ ಎಂದು ಕೈಮುಗಿದು ಬೇಡಿಕೊಂಡರು.

ಸದಸ್ಯ ಲಕ್ಷ್ಮಣ್ ಮಾತನಾಡಿ,ಎರಡು ವರ್ಷಗಳಿಂದ ಈ ಮಹಿಳೆಯ ಗೋಳು ಮುಗಿದಿಲ್ಲ. ಭೂಮಿಯಿದ್ದೂ ಕೃಷಿ ಮಾಡಲಾಗದೇ ಕೂಲಿನಾಲಿ ಮಾಡಿ ಬದುಕುತ್ತಿದ್ದಾರೆ ಎಂದು ಬೇಸರಿಸಿದರು.

ಉಪ ವಿಭಾಗಾಧಿಕಾರಿ ಶೇಖರ್, ಕೂಡಲೇ ಸರ್ವೇ ಮಾಡಿ ನಕಾಶೆಯಲ್ಲಿ ರಸ್ತೆಯಿದ್ದರೆ ಒತ್ತುವರಿ ತೆರವುಗೊಳಿಸಿ ಅನುಕೂಲ ಮಾಡಿಕೊಡಿ ಎಂದು ಎಡಿಎಲ್‌ಆರ್ ಜಗನ್ನಾಥ್‌ಗೆ ಸೂಚಿಸಿದರು.

ಸಮಿತಿಯ ಸದಸ್ಯೆ ನಾಗವೇಣಿ, ಡಿವೈಎಸ್‌ಪಿ ರವಿ, ತಹಸೀಲ್ದಾರ್ ರಾಜಶೇಖರಮೂರ್ತಿ, ಇಒ ಕೆ.ಹೊಂಗಯ್ಯ, ವಿವಿಧ ತಾಲೂಕುಗಳ ಅಧಿಕಾರಿಗಳು ಹಾಜರಿದ್ದರು.