ಜ್ಯೋತಿನಗರದ ಡಿಎಆರ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಪೊಲೀಸ್ ಕ್ರೀಡಾಕೂಟದಲ್ಲಿ ಜಿಲ್ಲಾ ಸಶಸ್ತ್ರ ಪಡೆಯ ರಘುನಂದನ್ ಅವರು ಕ್ರೀಡಾಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿದರು. ಕೆ.ಎಸ್.ಶಿಲ್ಪಾ, ಮಲ್ಲಿಕಾರ್ಜುನ ಬಾಲದಂಡಿ, ಸಿ.ಮಲ್ಲಿಕ್ ಇತರರಿದ್ದರು Sports are helpful in enhancing the performance of the police.
ಮೈಸೂರು

ಪೊಲೀಸರ ಕಾರ್ಯಕ್ಷಮತೆ ಹೆಚ್ಚಿಸಲು ಕ್ರೀಡೆ ಸಹಕಾರಿ

ಪ್ಯಾರಾ ಕಾಮನ್‌ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಕೆ.ಎಸ್.ಶಿಲ್ಪಾ ಅಭಿಪ್ರಾಯ ಪೊಲೀಸ್ ವಾರ್ಷಿಕ ಕ್ರೀಡಾಕೂಟ

ಮೈಸೂರು: ಕ್ರೀಡೆಗಳು ಒತ್ತಡ ನಿವಾರಣೆಯ ಪರಿಣಾಮಕಾರಿ ಮಾರ್ಗವಾಗಿದ್ದು, ಪೊಲೀಸರ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿಯಾಗಲಿವೆ ಎಂದು ಪ್ಯಾರಾ ಕಾಮನ್‌ವೆಲ್ತ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಕೆ.ಎಸ್.ಶಿಲ್ಪಾ ಅಭಿಪ್ರಾಯಪಟ್ಟರು.

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜ್ಯೋತಿನಗರದ ಡಿಎಆರ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಪೊಲೀಸರ ಕೆಲಸ ಎಂದರೆ ಸದಾ ಒತ್ತಡ, ಸವಾಲು, ಜವಾಬ್ದಾರಿಗಳಿಂದ ಕೂಡಿರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು, ಸಾರ್ವಜನಿಕರ ಸುರಕ್ಷತೆ, ಅಪರಾಧ ನಿಯಂತ್ರಣ ಸೇರಿದಂತೆ ವಿವಿಧ ಕರ್ತವ್ಯಗಳ ನಿರ್ವಹಣೆಯಲ್ಲಿ ತೊಡಗಿರುವ ಪೊಲೀಸರಿಗೆ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದರು.

ಪೊಲೀಸರು ದಿನದ ಬಹುತೇಕ ಸಮಯವನ್ನು ಕರ್ತವ್ಯದಲ್ಲೇ ಕಳೆಯುತ್ತಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು, ತುರ್ತು ಸಂದರ್ಭಗಳಲ್ಲಿ ಕಾರ್ಯನಿರ್ವಹಿಸುವುದು ಹಾಗೂ ಇಲಾಖೆಯ ಜವಾಬ್ದಾರಿಗಳನ್ನು ನಿಭಾಯಿಸುವ ಭರದಲ್ಲಿ ಆರೋಗ್ಯದ ಕಡೆಗೆ ನಿರ್ಲಕ್ಷ್ಯ ವಹಿಸುವ ಸಾಧ್ಯತೆಗಳಿವೆ.

ಆದರೆ, ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ವೃತ್ತಿಯ ಜವಾಬ್ದಾರಿ ಸಮರ್ಥವಾಗಿ ನಿರ್ವಹಿಸಲು ಸಾಧ್ಯ. ಜತೆಗೆ ಸಮಾಜಕ್ಕೂ ಉತ್ತಮ ಸೇವೆ ನೀಡಲು ಸಾಧ್ಯ. ಹೀಗಾಗಿ ಕರ್ತವ್ಯದಷ್ಟೇ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಬಿಡುವಿನ ಸಮಯದಲ್ಲಿ ಕ್ರೀಡೆ, ವ್ಯಾಯಾಮಕ್ಕೆ ಸಮಯ ಮೀಸಲಿಡಬೇಕು ಎಂದು ಸಲಹೆ ನೀಡಿದರು.

ಕ್ರೀಡೆಯಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ. ಅದರ ಹಿಂದೆ ನಿರಂತರ ಅಭ್ಯಾಸ, ಕಠಿಣ ಪರಿಶ್ರಮ, ಶಿಸ್ತು, ತಾಳ್ಮೆ, ಸಾಕಷ್ಟು ತ್ಯಾಗ ಇರುತ್ತದೆ. ಕ್ರೀಡಾಪಟುಗಳು ಪ್ರಶಸ್ತಿ ಅಥವಾ ಪದಕ ಗೆದ್ದಾಗ ಅವರ ಸಾಧನೆ ಮಾತ್ರ ಎಲ್ಲರ ಕಣ್ಣಿಗೆ ಕಾಣುತ್ತದೆ. ಆದರೆ, ಆ ಸಾಧನೆಯ ಹಿಂದೆ ಅವರು ಎದುರಿಸಿರುವ ನೋವು, ಸವಾಲು, ನಿರಂತರ ಪ್ರಯತ್ನಗಳು ಅನುಭವಿಸಿದವರಿಗೆ ಮಾತ್ರ ತಿಳಿಯಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಬೇಕಾದರೆ ಗುರಿಯೊಂದಿಗೆ ಶ್ರಮಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಸಶಸ್ತ್ರ ಪಡೆಯ ರಘುನಂದನ್ ಅವರು ಕ್ರೀಡಾಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿದರು. ಬಳಿಕ ಪೊಲೀಸ್ ಸಿಬ್ಬಂದಿ ಕ್ರೀಡಾಕೂಟದ ಉತ್ಸಾಹ ಮತ್ತು ಕ್ರೀಡಾ ಮನೋಭಾವವನ್ನು ಪ್ರತಿಬಿಂಬಿಸುವಂತೆ ಪಥಸಂಚಲನ ನಡೆಸಿದರು.

ಎಂ.ಸುಬ್ರಹ್ಮಣ್ಯ ನೇತೃತ್ವದಲ್ಲಿ ಮಹಿಳಾ ಪೊಲೀಸ್ ತಂಡ, ವಿಶೇಷ ಘಟಕ, ಹುಣಸೂರು, ಮೈಸೂರು ಗ್ರಾಮಾಂತರ, ನಂಜನಗೂಡು ಹಾಗೂ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿ ಗಮನ ಸೆಳೆದರು. ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಯಲ್ಲಿ ಉತ್ಸಾಹ, ಸಂಭ್ರಮ ಮನೆ ಮಾಡಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಮಲ್ಲಿಕ್ ಇತರರಿದ್ದರು.