‘ಪುಸ್ತಕ ಓದು, ಸಂಸ್ಕೃತಿ ಅಭಿಯಾನ’ ಕಾರ್ಯಕ್ರಮದಲ್ಲಿ ಮಾನಸ, ಪ್ರೊ.ಕೆ.ಅನಂತರಾಮು, ಪ್ರೊ.ಕೆ.ಅಜಯಕುಮಾರ್, ಪ್ರೊ.ಕೆ.ಬಿ.ಉಮೇಶ್ ಇತರರು ಇದ್ದರು. 
ಮೈಸೂರು

ಪುಸ್ತಕ ಓದುವವರ ಸಂಖ್ಯೆ ಕುಸಿತ: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಬೇಸರ

‘ಪುಸ್ತಕ ಓದು, ಸಂಸ್ಕೃತಿ ಅಭಿಯಾನ’

ಮೈಸೂರು: ತಂತ್ರಜ್ಞಾನದಿಂದ ಬೇಕಾದ ಪುಸ್ತಕಗಳು ಕೂಡಲೇ ನಮ್ಮ ಕೈ ಸೇರಿದರೂ ಓದುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಎಲ್ಲರೂ ಮೊಬೈಲ್ ಗೀಳಿಗೆ ಒಳಗಾಗುತ್ತಿದ್ದಾರೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಬೇಸರಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಯುವರಾಜ ಕಾಲೇಜಿನ ಕನ್ನಡ ವಿಭಾಗ, ಗಣಕ ವಿಜ್ಞಾನ ವಿಭಾಗದ ಸಹಯೋಗದಲ್ಲಿ ಮಂಗಳವಾರ ಯುವರಾಜ ಕಾಲೇಜಿನ ಅಮೃತಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪುಸ್ತಕ ಓದು, ಸಂಸ್ಕೃತಿ ಅಭಿಯಾನ’ ಉದ್ಘಾಟಿಸಿ ಮಾತನಾಡಿದರು.

ಹಿಂದೆ ಪುಸ್ತಕಗಳು ಕೈ ಸೇರಲು ವರ್ಷಗಳೇ ಬೇಕಾಗುತ್ತಿತ್ತು. ಆದರೆ ಈಗ ಅಮೆರಿಕದಲ್ಲಿ ಬಿಡುಗಡೆಗೊಂಡ ಪುಸ್ತಕ, ಕನ್ನಡಕ್ಕೆ ತರ್ಜುಮೆಯಾಗಿ ತಿಂಗಳೊಳಗೆ ಕೈಯಲ್ಲಿ ಇರುವಷ್ಟು ತಂತ್ರಜ್ಞಾನ ಬೆಳೆದಿದೆ. ಆದರೂ ಓದುಗರ ಆಸಕ್ತಿ ಕ್ಷೀಣಿಸುತ್ತಿದೆ ಎಂದರು.

ಮುದ್ರಣ ತಂತ್ರಜ್ಞಾನವಿಲ್ಲದೆ ಈ ಹಿಂದೆ ಕುವೆಂಪು ಸೇರಿದಂತೆ ಪ್ರಸಿದ್ಧ ಬರಹಗಾರರು ಒಂದು ಪುಸ್ತಕ ಬರೆದರೂ ಅದು ನಮ್ಮ ಕೈ ಸೇರಲು ಒಂದು ವರ್ಷ ಬೇಕಾಗುತ್ತಿತ್ತು. ಮತ್ತೆ ಆ ಪುಸ್ತಕಗಳು ಮರು ಮುದ್ರಣ ಮಾಡಬೇಕೆಂದರೆ ಮತ್ತೆ ಇನ್ನೊಂದು ವರ್ಷ ಬೇಕಾಗುತ್ತಿತ್ತು ಎಂದು ಹೇಳಿದರು.

ಇಂದು ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ನಮ್ಮ ಕೈಯಲ್ಲಿ ಮೊಬೈಲ್ ಆವರಿಸಿಕೊಂಡಿದೆ. ಹಾಗಾಗಿ ಯುವಜನರನ್ನು ಪುಸ್ತಕ ಓದಿನತ್ತ ಸೆಳೆಯಲು ಅಂಗಳದಲ್ಲಿ ತಿಂಗಳ ಪುಸ್ತಕ ಕಾರ್ಯಕ್ರಮದ ಮೂಲಕ ಪುಸ್ತವನ್ನು ಓದಿಸುತ್ತೇವೆ. ಮಕ್ಕಳ ಮಿದಳು ಹಸಿ ಮಣ್ಣಿದ್ದಂತೆ. ಯಾವುದೇ ವಿಷಯ ಹಂಚಿಕೊಂಡರೂ ಅದನ್ನು ಬಹಳ ಚೆನ್ನಾಗಿ ಗ್ರಹಿಸಿಕೊಳ್ಳುತ್ತದೆ ಎಂದರು.

ನಗರ, ಪಟ್ಟಣ ಪ್ರದೇಶಗಳಲ್ಲಿ ಸರ್ಕ್ಯೂಲೇಟಿಂಗ್ ಲೈಬ್ರರಿಗಳು ಇರುತ್ತಿದ್ದವು. ಅಲ್ಲಿ ನಾಳೆ ಲೈಬ್ರರಿಗೆ ಯಾವ ಪುಸ್ತಕಗಳು ಬರುತ್ತಿದ್ದವು ಎಂಬ ಫಲಕವನ್ನು ಹಾಕುತ್ತಿದ್ದರು. ಜನರು ಆ ಪುಸ್ತಕಗಳನ್ನು ಬಾಡಿಗೆಗೆ ಪಡೆದು ಓದಿ ವಾಪಸ್ ನೀಡುತ್ತಿದ್ದೆವು. ಇದನ್ನು ಮಹಿಳೆಯರೇ ಹೆಚ್ಚು ಪುಸ್ತಕಗಳನ್ನು ಓದುತ್ತಿದ್ದರು. ಈಗ ಧಾರವಾಹಿಗಳಲ್ಲಿ ಮುಳುಗಿ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ವಿಸ್ವಾಂಸ ಪ್ರೊ.ಕೆ.ಅನಂತರಾಮು, ಯುವರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಅಜಯಕುಮಾರ್, ಆಡಳಿತಾಧಿಕಾರಿ ಪ್ರೊ.ಕೆ.ಬಿ.ಉಮೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಎಚ್.ಎಸ್. ಜಯಂತ್, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಡಿ. ಪರಶುರಾಮ, ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥೆ ಅನ್ನಪೂರ್ಣ, ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಿತಿಯ ಸಂಚಾಲಕ ಎಂ.ಚಂದ್ರಶೇಖರ್ ಇತರರು ಇದ್ದರು.