ಸರಗೂರು ತಾಲೂಕಿನ ನುಗು ಜಲಾಶಯದ ಹಿನ್ನೀರಿನ ಪುರದಕಟ್ಟೆ ಕ್ಯಾಂಪ್ ನಲ್ಲಿ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಿತ್ರಾ, ಲೋಕೇಶ್, ಸಣ್ಣಸ್ವಾಮಿ, ಮುತ್ತಪ್ಪ, ಇತರರು ಇದ್ದರು. 
ಮೈಸೂರು

ಪರಿಸರ ಸಂರಕ್ಷಣೆ ಮನೋಭಾವ ಬೆಳೆಯಲಿ

ಎಸ್.ಡಿ.ಸಣ್ಣಸ್ವಾಮಿ ಸಲಹೆ

ಸರಗೂರು: ಪ್ರಕೃತಿಯನ್ನು ಉಳಿಸುವುದು ಸರ್ಕಾರ ಅಥವಾ ಅರಣ್ಯ ಇಲಾಖೆಯೊಂದರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನೂ ಪರಿಸರ ಸಂರಕ್ಷಣೆ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ದಸಂಸ (ಲಕ್ಷ್ಮೀನಾರಾಯಣ ನಾಗವಾರ ಸ್ಥಾಪಿತ) ಜಿಲ್ಲಾ ಸಂಚಾಲಕ ಎಸ್.ಡಿ.ಸಣ್ಣಸ್ವಾಮಿ ಸಲಹೆ ನೀಡಿದರು.

ತಾಲೂಕಿನ ನುಗು ಜಲಾಶಯದ ಪುರದಕಟ್ಟೆ ಕ್ಯಾಂಪ್‌ನಲ್ಲಿ ಮೈಸೂರು ಪ್ರಾದೇಶಿಕ ವಿಭಾಗ ಸರಗೂರು ಅರಣ್ಯ ಇಲಾಖೆ ವಲಯ ಹಾಗೂ ಪ್ರಗತಿ ವಿದ್ಯಾಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ವನ್ಯಜೀವಿ ಸಪ್ತಾಹ-2026ಕ್ಕೆ ಚಾಲನೆ ನೀಡಿ ಮಾತನಾಡಿದರು.

ಅರಣ್ಯ ಪ್ರದೇಶಗಳನ್ನು ನಾಶಪಡಿಸಿ ಮರ- ಗಿಡಗಳನ್ನು ಕಡಿದು, ವನ್ಯಜೀವಿಗಳ ಆವಾಸಸ್ಥಾನಗಳನ್ನು ಅತಿಕ್ರಮಿಸುತ್ತಿರುವುದರಿಂದ ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತಿದೆ. ಬರದಂತಹ ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ಮನುಷ್ಯ ಹಾಗೂ ವನ್ಯಜೀವಿಗಳ ನಡುವೆ ಸಹಬಾಳ್ವೆ ಬೆಳೆಸುವುದರ ಜತೆಗೆ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ತಿಳಿಸಿದರು.

ಅರಣ್ಯ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯವನ್ನು ಎಸೆಯುವುದನ್ನು ಸಂಪೂರ್ಣವಾಗಿ ತಡೆಯಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರಾಣಿಗಳು ಆಹಾರವೆಂದು ಸೇವಿಸಿ ಅನಾರೋಗ್ಯಕ್ಕೆ ಒಳಗಾಗುವ ಹಾಗೂ ಸಾವಿಗೀಡಾಗುವ ಸಾಧ್ಯತೆ ಇದೆ. ಹೀಗಾಗಿ ಅರಣ್ಯಕ್ಕೆ ತೆರಳುವ ಸಾರ್ವಜನಿಕರು ಪರಿಸರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.

ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯ. ಒಬ್ಬ ವಿದ್ಯಾರ್ಥಿ ಪರಿಸರದ ಬಗ್ಗೆ ಅರಿವು ಪಡೆದು ಅದನ್ನು ಮತ್ತೊಬ್ಬರಿಗೆ ತಿಳಿಸಿದಾಗ, ಆ ಅರಿವು ಮತ್ತಷ್ಟು ಜನರಿಗೆ ತಲುಪುತ್ತದೆ ಎಂದರು.

ಎಸಿಎಫ್ ಎಸ್.ಸುಮಿತ್ರಾ ಮಾತನಾಡಿ. ಕಾಡು ಉಳಿದರೆ ಮಾತ್ರ ನಾಡು ಉಳಿಯುತ್ತದೆ. ಪ್ರಕೃತಿಯನ್ನು ನಾವು ರಕ್ಷಿಸಿದರೆ ಪ್ರಕೃತಿಯೂ ನಮ್ಮನ್ನು ರಕ್ಷಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯನ್ನು ತಮ್ಮ ಕರ್ತವ್ಯವೆಂದು ಭಾವಿಸಬೇಕು ಎಂದರು.

ಮರಗಿಡಗಳು ಹಾಗೂ ಕಾಡು ಉಳಿದರೆ ಮಾತ್ರ ಮಳೆ, ಅಂತರ್ಜಲ ಮತ್ತು ಪರಿಸರ ಸಮತೋಲನ ಕಾಪಾಡಲು ಸಾಧ್ಯ. ಆದರೆ ಮನುಷ್ಯರು ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಪ್ರದೇಶಗಳನ್ನು ನಾಶಪಡಿಸುತ್ತಿರುವುದರಿಂದ ವನ್ಯಜೀವಿಗಳು ತಮ್ಮ ಆವಾಸಸ್ಥಾನ ಕಳೆದುಕೊಂಡು ಆಹಾರ ಮತ್ತು ನೀರಿಗಾಗಿ ಜನವಸತಿ ಪ್ರದೇಶಗಳತ್ತ ಬರುವಂತಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ ಎಂದರು. ಆರ್‌ಎಫ್‌ಒ ಲೋಕೇಶ್, ಮುತ್ತಪ್ಪ, ಡಿಆರ್‌ಎಫ್‌ಒ ಪ್ರದೀಪ್, ಅರ್ಪಿತಾ, ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಪ್ರಗತಿ ವಿದ್ಯಾಸಂಸ್ಥೆಯ ಮಕ್ಕಳು ಭಾಗವಹಿಸಿದ್ದರು.