ರಾಮಪ್ರಸಾದ್ 
ಮೈಸೂರು

ಪತಿಯನ್ನು ಕೊಂದ ಪತ್ನಿ, ಪ್ರಿಯಕರನ ಬಂಧನ

ಪ್ರಿಯಕನೊಂದಿಗೆ ಸೇರಿ ಕೃತ್ಯ

ಹುಣಸೂರು

ದತ್ತೂರಿ ಬೀಜದಪುಡಿ ಬೇರಿಸಿದ ಆಹಾರ ತಿನಿಸಿದ ಬಳಿಕ ಕತ್ತು ಹಿಸುಕಿ ಪತಿಯನ್ನೇ ಕೊಲೆ ಮಾಡಿರುವ ಆರೋಪದ ಮೇರೆಗೆ ಪತ್ನಿ, ಆಕೆಯ ಪ್ರಿಯಕರನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ತಾಲೂಕಿನ ವಿನೋಬಾ ಕಾಲನಿ ನಿವಾಸಿ ಗಾರೆ ಕೆಲಸಗಾರ ರಾಮಪ್ರಸಾದ್(35)ಮೃತ. ಪತ್ನಿ ಪವಿತ್ರಾ, ಪ್ರಿಯಕರ ಸುನೀಲ್ ಬಂಧಿತರು.

12 ವರ್ಷಗಳ ಹಿಂದೆ ರಾಮಪ್ರಸಾದ್ ಮೈಸೂರಿನ ಕೆಸರೆಯ ಪವಿತ್ರಾಳನ್ನು ವಿವಾಹನವಾಗಿದ್ದ. ದಂಪತಿಗೆ 11 ವರ್ಷದ ಮೋಕ್ಷಿತ್, 9 ವರ್ಷದ ಸಮೀಕ್ಷಾ ಇಬ್ಬರು ಮಕ್ಕಳಿದ್ದಾರೆ.

ಘಟನೆ ವಿವವರ: ರಾಮಪ್ರಸಾದ್‌ನ ಹತ್ತಿರದ ಸಂಬಂಧಿ ಅದೇ ಗ್ರಾಮದ ಅವಿವಾಹಿತ ಸುನೀಲ್ ಇತ್ತೀಚೆಗೆ ಪವಿತ್ರಾ ಜತೆ ಸಂಬಂಧ ಹೊಂಡಿದ್ದ, ಇದೇ ವಿಚಾರಕ್ಕೆ ಜಗಳ ನಡೆದಿತ್ತು. ರಾಮಪ್ರಸಾದ್ ಬದುಕಿದ್ದರೆ ಸಂಬಂಧಕ್ಕೆ ಅಡ್ಡಿಯಾಗುತ್ತಾನೆ ಎಂದು ಆ.16ರಂದು ಇಡ್ಲಿಯಲ್ಲಿ ದತ್ತೂರಿ ಬೀಜ ಸೇರಿಸಿ ರಾಮಪ್ರಸಾದ್‌ಗೆ ತಿನ್ನಿಸಿದ್ದರು. ಪತಿ ಅಸ್ವಸ್ಥಗೊಂಡ ನಂತರ ರಾಮಪ್ರಸಾದ್ ಸಹೋದರನಿಗೆ ರಾತ್ರಿ 11ರ ವೇಳೆಯಲ್ಲಿ ಕರೆ ಮಾಡಿದ ಪವಿತ್ರಾ, ಮೊಸರನ್ನ ತಿಂದು ಮಲಗಿದ್ದವರು ಏಳುತ್ತಿಲ್ಲ ಎಂದು ತಿಳಿಸಿದ್ದಳು. ಅಸ್ವಸ್ಥಗೊಂಡಿದ್ದ ರಾಮಪ್ರಸಾದ್‌ನನ್ನು ಹುಣಸೂರು ಆಸ್ಪತ್ರೆಗೆ ಕರೆತಂದ ವೇಳೆ ವೈದ್ಯರು ಮೃತಪಟ್ಟಿದ್ದಾರೆಂದು ದೃಢಪಡಿಸಿದ್ದರು. ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹವನ್ನು ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಅ.17ರಂದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಿದರು. ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿತ್ತು.

ಪೊಲೀಸರು ಎಫ್‌ಎಸ್‌ಎಲ್ ವರದಿ ನಿರೀಕ್ಷೆಯಲ್ಲಿದ್ದರು. ಸಾವಿನ ಬಗ್ಗೆ ಗ್ರಾಮದಲ್ಲಿ ಚರ್ಚೆ ನಡೆದಿತ್ತು. ಅಲ್ಲದೆ ಸುನೀಲ್ ಅ.16ರಾತ್ರಿ 9.30ರ ವೇಳೆಯಲ್ಲಿ ಮನೆಗೆ ಬಂದಿದ್ದನ್ನು ಅಕ್ಕಪಕ್ಕದವರು ನೋಡಿದ್ದರು. ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪವಿತ್ರಾ ಹಾಗೂ ಪ್ರಿಯಕರ ಸುನೀಲ್ ವಿರುದ್ಧ ರಾಮಪ್ರಸಾದ್ ಸಹೋದರ ಚಂದ್ರಹಾಸ ದೂರು ನೀಡಿದ್ದರು. ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದ ವೇಳೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನ ಒಪ್ಪಿಸಲಾಗಿದೆ. ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ಹಾಗೂ ಸಿಬ್ಬಂದಿ ಮಹಜರ್ ನಡೆಸಿದ್ದಾರೆ.

ಜಾಲತಾಣ ನೋಡಿ ಕೊಲೆಸಂಚು

ಯಾವರೀತಿ ಕೊಲೆ ಮಾಡಬೇಕೆಂಬುದರ ಬಗ್ಗೆ ಪವಿತ್ರಾ ಹಾಗೂ ಸುನೀಲ್ ಜಾಲತಾಣದಲ್ಲಿ ಹುಡುಕಾಟ ನಡೆಸಿದ್ದು, ಅಲ್ಲಿ ದತ್ತೂರಿ ಬೀಜದ ಪುಡಿಯನ್ನು ಆಹಾರದಲ್ಲಿ ಬೆರೆಸಿ ತಿನ್ನಿಸುವುದರಿಂದ ಸಾಯುತ್ತಾರೆಂಬ ಮಾಹಿತಿ ಆಧರಿಸಿ ಸಂಚು ರೂಪಿಸಿದ್ದರು. ಆದರೆ, ದತ್ತೂರಿ ಬೀಜಪುಡಿ ಮಿಶತ್ರಿ ಇಂಡ್ಲಿ ತಿಂದಿದ್ದ ರಾಮಪ್ರಸಾದ್ ಅಸ್ವಸ್ಥಗೊಂಡಿದ್ದ. ಮೃತಪಟ್ಟಿರಲಿಲ್ಲ. ಹೀಗಾಗಿ ಇಬ್ಬರೂ ಕತ್ತು ಹಿಸುಕಿ ಸಾಯಿಸಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.