ನಂಜನಗೂಡು ತಾಲೂಕು ದಾಸನೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಿದ್ದರಾಮಯ್ಯ ಉದ್ಘಾಟಿಸಿದರು. ಡಾ.ಯತೀಂದ್ರ ಸಿದ್ದರಾಮಯ್ಯ, ದರ್ಶನ್ ಧ್ರುವನಾರಾಯಣ, ಡಾ. ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಎಚ್.ಸಿ.ಬಸವರಾಜು, ಬೀರಿಹುಂಡಿ ಬಸವಣ್ಣ, ಬಿ.ಎಂ.ರಾಮು ಇತರರು ಇದ್ದರು. 
ಮೈಸೂರು

ಪಂಚ ಗ್ಯಾರಂಟಿಯಿಂದ ಜನರ ಗುಳೆ ತಪ್ಪಿದೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ

ದಾಸನೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ

ಮೈಸೂರು: ಭೀಕರ ಬರಗಾಲದಲ್ಲಿ ನಾವು ನೀಡಿರುವ ಪಂಚ ಗ್ಯಾರಂಟಿಗಳು ಜನರಿಗೆ ಕೊಂಚ ಅನುಕೂಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲೂಕು ದಾಸನೂರಿನಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದ್ದು, 240 ತಾಲೂಕುಗಳಲ್ಲಿ 217 ತಾಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ರಾಜ್ಯದ ಜಲಾಶಯಗಳು ಭರ್ತಿಯಾಗಿಲ್ಲ. ತಮಿಳುನಾಡಿಗೆ 125.75 ಟಿಎಂಸಿ ನೀರು ಹೋಗಬೇಕಾಗಿದ್ದರೂ, ವಾಸ್ತವವಾಗಿ ಇದುವರೆಗೆ ಸುಮಾರು 45 ಟಿಎಂಸಿ ನೀರು ಮಾತ್ರ ಹೋಗಿದೆ. 126 ವರ್ಷಗಳಲ್ಲೇ ಈ ಬಾರಿ ಭೀಕರ ಬರ ಕಾಣಿಸಿಕೊಂಡಿದೆ ಎಂದು ಹೇಳಿದರು.

ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರದೆ ಹೋಗಿದ್ದರೆ ರೈತರು ಮತ್ತು ಬಡವರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಬಹಳಷ್ಟು ಜನರು ಗುಳೆ ಹೋಗುವುದು ತಪ್ಪಿದೆ ಎಂದರು.

ಈ ಯೋಜನೆಗಳ ಮೂಲಕ ಎಲ್ಲ ಜಾತಿ ವರ್ಗ, ಧರ್ಮದ ಜನರ ಕೈಗೆ ಹಣ ಸಿಕ್ಕಿದೆ, ಅನ್ನ ಸಿಕ್ಕಿದೆ, ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಸಿಕ್ಕಿದೆ ಹಾಗೂ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ಹಣ ದೊರೆಯುತ್ತಿದೆ ಎಂದು ಹೇಳಿದರು.

ಈ ಯೋಜನೆಗಳನ್ನು ಜಾರಿಗೆ ತರಲು ನನಗೆ ಶಕ್ತಿ ನೀಡಿದವರು ವರುಣ ಕ್ಷೇತ್ರದ ಜನತೆ. ನಾನು ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿ ಆಗದೇ ಹೋಗಿದ್ದರೆ ಈ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಈ ಕಾರ್ಯಕ್ರಮಗಳ ಹಿಂದೆ ವರುಣ ಕ್ಷೇತ್ರದ ಜನರೂ ಇದ್ದಾರೆ ಎಂಬುದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.

ರಾಹುಲ್ ಗಾಂಧಿ ಯಾವಾಗ ಹೇಳುತ್ತಾರೋ ಆಗ ಮುಖ್ಯಮಂತ್ರಿ ಸ್ಥಾನವನ್ನು ಬಿಡುತ್ತೇನೆ ಎಂದು ನಾನು ನಾಲ್ಕೈದು ಬಾರಿ ಹೇಳಿದ್ದೆ. ಆ ಮಾತನ್ನು ಉಳಿಸಿಕೊಂಡು ಮುಖ್ಯಮಂತ್ರಿ ಸ್ಥಾನದಿಂದ ಹಿಂದೆ ಸರಿದಿದ್ದೇನೆ. ಅಧಿಕಾರ ಇರಲಿ ಇಲ್ಲದಿರಲಿ, ವರುಣ ಕ್ಷೇತ್ರದ ಜನರ ಸೇವೆ ಮಾಡುತ್ತೇನೆ ಎಂದರು.

158 ಭರವಸೆಗಳ ಈಡೇರಿಕೆ:

2013ರಲ್ಲಿ ಮುಖ್ಯಮಂತ್ರಿಯಾದ್ದಾಗ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಲಾಗಿತ್ತು. ಆ 165 ಭರವಸೆಗಳ ಪೈಕಿ 158 ಈಡೇರಿಸಲಾಗಿದೆ. ಇದಲ್ಲದೆ ಸುಮಾರು 20ರಿಂದ 30 ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತಂದ ತೃಪ್ತಿ ನನಗಿದೆ ಎಂದು ಹೇಳಿದರು.

2023ರಲ್ಲಿ ಅಧಿಕಾರಕ್ಕೆ ಬಂದಾಗ ಒಂದೇ ವರ್ಷದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.

ವರುಣ ಕ್ಷೇತ್ರದ ನಾಲ್ಕು ಅವಧಿಗಳಲ್ಲಿ ಸುಮಾರು 5,034 ಕೋಟಿ ರೂ.ಗಳ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಇಂದು 183 ಕೋಟಿ ರೂ. 64 ಲಕ್ಷ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಮುಂದಿನ ದಿನಗಳಲ್ಲೂ ಕ್ಷೇತ್ರದ ಜನರಿಗಾಗಿ ಕೆಲಸ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದರು.

ಬಡ-ಮಧ್ಯಮ ವರ್ಗದವರಿಗೆ ಜೀವನಾಡಿ:

ಜಿಲ್ಲಾ ಉಸ್ತುವಾರಿ ಡಾ. ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಇಂದು ದಿನಬಳಕೆ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಸಾಲದ್ದಕ್ಕೆ ಭೀಕರ ಬರಗಾಲವೂ ಆವರಿಸಿದೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳು ಜೀವನಾಡಿಯಾಗಿತ್ತಿವೆ ಎಂದರು.

ಸರ್ಕಾರದ ಬಳಿ ಇರುವ ಹಣ ಸರ್ಕಾರದ ಸ್ವಂತದ್ದಲ್ಲ, ಅದು ಜನರು ತೆರಿಗೆ ರೂಪದಲ್ಲಿ ನೀಡಿರುವುದು. ಜನರ ತೆರಿಗೆ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಮರಳಿ ಜನರಿಗೇ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ದಾಸನೂರು ಗ್ರಾಮದಲ್ಲಿ 22.50 ಕೋಟಿ ರೂ. ವೆಚ್ಚದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯನ್ನು ನಿರ್ಮಿಸಿ ಉದ್ಘಾಟಿಸಲಾಗಿದೆ. ವರುಣ ಕ್ಷೇತ್ರದ ಪ್ರತಿಯೊಂದು ಹೋಬಳಿಯಲ್ಲೂ ಬಡ ಹಾಗೂ ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ವಸತಿ ಶಾಲೆಗಳನ್ನು ತೆರೆಯಲಾಗುತ್ತಿದೆ ಎಂದು ತಿಳಿಸಿದರು.

ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಮಾತನಾಡಿ, ಸರ್ಕಾರವು ಚುನಾವಣೆಗೆ ಮುನ್ನ ನೀಡಿದ್ದ ಭರವಸೆಯಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ. ಇದು ಜನರಿಗೆ ಅನುಕೂಲವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯರಾದ ಡಾ. ಡಿ.ತಿಮಯ್ಯ, ಕೆ.ಶಿವಕುಮಾರ್, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷ ಮರಿಸ್ವಾಮಿ, ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನಂತ, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್.ಸಿ.ಬಸವರಾಜು, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ನಗರ ಕಾರ್ಯದರ್ಶಿ ಎಂ.ಶಿವಣ್ಣ, ಮುಖಂಡರಾದ ವರುಣ ಮಹೇಶ್ ಇತರರು ಇದ್ದರು.