ಮಾನಸಗಂಗೋತ್ರಿಯ ಮಳವಿಯಾ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋತಿಲಾಲ್ ಕೃಷ್ಣ ಲಮಾಣಿ ಮಾತನಾಡಿದರು. ಪ್ರೊ.ಎಚ್.ಪಿ. ಜ್ಯೋತಿ, ಅಶೋಕ್, ಕಮಲಮ್ಮ ಇದ್ದರು. 
ಮೈಸೂರು

ನಾಡಿನ ಕಲೆ ಪಸರಿಸಲು ವಿದೇಶಿ ಭಾಷೆ ಕಲಿಕೆ ಅವಶ್ಯ: ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಮೋತಿಲಾಲ್ ಲಮಾಣಿ ಅಭಿಮತ

ಮೈಸೂರು: ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಜಾಗತಿಕ ಮಟ್ಟಕ್ಕೆ ತಲುಪಿಸಲು ವಿದೇಶಿ ಭಾಷೆಗಳ ಕಲಿಕೆಯ ಅವಶ್ಯವಾಗಿದೆ ಎಂದು ಮೈಸೂರು ವಿಭಾಗದ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಮೋತಿಲಾಲ್ ಕೃಷ್ಣ ಲಮಾಣಿ ಹೇಳಿದರು.

ಪ್ರವಾಸೋದ್ಯಮ ಇಲಾಖೆಯಿಂದ ಮಾನಸ ಗಂಗೋತ್ರಿಯ ಮಳವಿಯಾ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಎಸ್‌ಸಿಎಸ್‌ಪಿ/ ಟಿಎಸ್‌ಪಿ ಯೋಜನೆಯಡಿ ನೋಂದಾಯಿಸಲ್ಪಟ್ಟ ಎಸ್‌ಸಿ/ಎಸ್‌ಟಿ ಪ್ರವಾಸಿ ಮಾರ್ಗದರ್ಶಿಗಳಿಗೆ ವಿದೇಶಿ ಭಾಷೆಗಳ ಕಲಿಕೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರೇಕ್ಷಣೀಯ ಸ್ಥಳಗಳನ್ನು ನೋಡಲು ಬರುವ ವಿದೇಶಿಯರಿಗೆ ಅವರ ಭಾಷೆಯಲ್ಲಿ ಆ ಸ್ಥಳದ ಇತಿಹಾಸ, ಪ್ರಖ್ಯಾತಿಯನ್ನು ವರ್ಣಿಸಿದರೆ ಅವರಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಇದರಿಂದ ವಿದೇಶಿಗರು ತಾಯ್ನಡಿಗೆ ಹಿಂದಿರುಗಿದಾಗ ನಮ್ಮ ದೇಶದಲ್ಲಿ ನೋಡಿದ ಸ್ಥಳಗಳ ಬಗ್ಗೆ ಅಲ್ಲಿಯವರಿಗೆ ತಿಳಿಸುತ್ತಾರೆ. ತನ್ಮೂಲಕ ಪ್ರವಾಸಿಗರು ಹೆಚ್ಚಾಗುತ್ತಾರೆ. ಈ ಹಿನ್ನೆಲೆಯಲ್ಲಿ ಇಂತಹ ತರಬೇತಿ ಪ್ರವಾಸಿ ಮಾರ್ಗದರ್ಶಿಗಳಿಗೆ ಅತ್ಯಂತ ಸಹಕಾರಿಯಾಗಿದೆ ಎಂದರು.

ಹಾಗಾಗಿ ಪ್ರವಾಸಿ ಮಾರ್ಗದರ್ಶಿಗಳು ವಿದೇಶಿ ಪ್ರವಾಸಿಗರೊಂದಿಗೆ ಯಶಸ್ವಿಯಾಗಿ ಸಂವಹನ ನಡೆಸಲು ವಿದೇಶಿ ಭಾಷಾ ಕಲಿಕೆ ಅಗತ್ಯವಾಗಿದೆ. ಪ್ರವಾಸಿ ಮಾರ್ಗದರ್ಶಿಗಳು ತರಬೇತಿ ಸಮಯಲ್ಲಿ ಕಲಿತುಕೊಂಡ ಭಾಷಾ ಜ್ಞಾನವನ್ನು ಪ್ರವಾಸಿಗರೊಂದಿಗೆ ಬಳಸುವುದರ ಮೂಲಕ ಭಾಷೆಯನ್ನು ಜೀವಂತವಾಗಿರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೈಸೂರು ಸೇರಿದಂತೆ ಹಂಪಿ, ಬೇಲೂರು, ಹಳೆಬೀಡು, ಬಾದಾಮಿ, ಐಹೊಳೆ ಹಾಗೂ ಪಟ್ಟದ ಕಲ್ಲಿನಂತಹ ಐತಿಹಾಸಿಕ ತಾಣಗಳ ಸೂಕ್ಷ್ಮ ಶಿಲ್ಪಕಲೆಯನ್ನು ವಿದೇಶಿ ಪ್ರವಾಸಿಗರಿಗೆ ಮನಮುಟ್ಟುವಂತೆ ವಿವರಿಸಲು ಈ ತರಬೇತಿಯಿಂದ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಫ್ರೆಂಚ್ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಸ್ವಂತ ಲಿಪಿ ಇಲ್ಲದೆ ರೋಮನ್, ಲ್ಯಾಟಿನ್ ಅಕ್ಷರಗಳನ್ನು ಬಳಸುತ್ತಾರೆ. ಆದರೆ ನಮ್ಮ ಕನ್ನಡ ಭಾಷೆಗೆ ತನ್ನದೇ ಆದ ಸುಂದರ ಲಿಪಿಯಿದೆ. ಕಲೆ, ಸಾಹಿತ್ಯ, ಸಂಗೀತದ ಜತೆಗೆ ನಮ್ಮ ಕನ್ನಡ ಭಾಷೆಯೂ ಬಹಳ ಶ್ರೀಮಂತವಾಗಿದೆ ಎನ್ನುವುದನ್ನೂ ಮರೆಯಬಾರದು ಎಂದು ಹೇಳಿದರು.

ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕಿ ಪ್ರೊ.ಎಚ್.ಪಿ. ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ಪ್ರವಾಸಿ ಮಾರ್ಗದರ್ಶಕರ ಸಂಘದ ಅಧ್ಯಕ್ಷ ಅಶೋಕ್, ಮೈಸೂರು ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವೆ ಕಮಲಮ್ಮ, ತರಬೇತಿ ಸಂಯೋಜಕ ಡಾ. ನಂಜುಂಡಸ್ವಾಮಿ, ಬೋಧಕರಾದ ಪ್ರೊ. ದಿನೇಶ್ ಕುಮಾರ್, ಅನಿಲ್ ಕುಮಾರ್, ಪ್ರದೀಪ್‌ಕುಮಾರ್ ಇತರರು ಇದ್ದರು.

ತರಬೇತಿಯಲ್ಲಿ ಭಾಗವಹಿಸಿದ್ದ ಶಿಬಿರಾರ್ಥಿಗಳು ಅನುಭವ ಹಂಚಿಕೊಂಡು, ಫ್ರೆಂಚ್, ಇಂಗ್ಲಿಷ್ ಭಾಷಾ ಕಲಿಕೆಯ ಕುರಿತು ಸಂತಸ ವ್ಯಕ್ತಪಡಿಸಿದರು.