ಚಾಮುಂಡಿಬೆಟ್ಟದಲ್ಲಿ ಭಾನುವಾರ ಆಯೋಜಿಸಿದ್ದ ನಾಡಹಬ್ಬ ದಸರಾ ಮಹೋತ್ಸವವನ್ನು ಬೆಳ್ಳಿರಥದಲ್ಲಿ ವಿರಾಜಮಾನವಾಗಿದ್ದ ಪಂಚಲೋಹದ ಚಾಮುಂಡೇಶ್ವರಿದೇವಿ ಮೂರ್ತಿಗೆ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿದರು. ಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಶಿವರಾಜ ತಂಗಡಗಿ, ಈಶ್ವರ ಖಂಡ್ರೆ ಇನ್ನಿತರರಿದ್ದರು. Grand launch of the state festival Dasara
ಮೈಸೂರು

ನಾಡಹಬ್ಬ ದಸರೆಗೆ ವೈಭವದ ಚಾಲನೆ

ತಾಯಿ ಚಾಮುಂಡೇಶ್ವರಿಗೆ ಅಗ್ರಪೂಜೆ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯಿಂದ ಪುಷ್ಪಾರ್ಚನೆ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಶತಮಾನಗಳ ಇತಿಹಾಸ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ತನ್ನೊಳಗೆ ಅಡಗಿಸಿಕೊಂಡಿರುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ ವೈಭವದ ಚಾಲನೆ ದೊರೆಯಿತು. ಇದರೊಂದಿಗೆ ಅರಮನೆ ನಗರಿ ಪರಿಮಳ ಸೇರಿದಂತೆ ನಾಡಿನೆಲ್ಲಡೆ ಹರಡುವಂತೆ ಮಾಡಿತು.

ವಿಜಯನಗರ ಸಾಮ್ರಾಜ್ಯದ ಕಾಲದಿಂದ ಬೆಳೆದು ಬಂದು, ಮೈಸೂರು ಅರಸ ಆಳ್ವಿಕೆಯಲ್ಲಿ ವಿಶಿಷ್ಟ ರೂಪ ಪಡೆದು, ಇಂದಿನ ಪ್ರಜಾಸರ್ಕಾರದ ಕಾಲಘಟ್ಟದಲ್ಲಿ ನಾಡಹಬ್ಬವಾಗಿ ರೂಪಾಂತರಗೊಂಡ 416ನೇ ದಸರೆಗೆ ಚಾಮುಂಡಿಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ಅಗ್ರಪೂಜೆಯೊಂದಿಗೆ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು.

ಬೆಳ್ಳಿರಥದಲ್ಲಿ ವಿರಾಜಮಾನವಾಗಿದ್ದ ಪಂಚಲೋಹದ ನಾಡದೇವಿ ಮೂರ್ತಿಗೆ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ದೀಪ ಬೆಳಗಿ ಪುಷ್ಪಾರ್ಚನೆ ಸಲ್ಲಿಸಿದ ಬಳಿಕ, ಮಧ್ಯಾಹ್ನ 12.06 ಕ್ಕೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ದಸರೆಯನ್ನು ಉದ್ಘಾಟಿಸಿದರು. ಇದರೊಂದಿಗೆ ಸಾಂಸ್ಕೃತಿಕ ತೇರನ್ನು ಎಳೆದು ಶುಭಕೋರಿದರು.

ಬೆಟ್ಟಕ್ಕೆ ಆಗಮಿಸಿದ ಅತಿಥಿಗಳನ್ನು ಜಾನಪದ ಕಲಾತಂಡಗಳು, ಪೂರ್ಣಕುಂಭದ ಮೂಲಕ ಸ್ವಾಗತ ಕೋರಲಾಯಿತು. ಎಲ್ಲರ ಕೇಂದ್ರ ಬಿಂದುವಾಗಿದ್ದ ಕೊಪ್ಪಳ ಶ್ರೀಗಳನ್ನು ಕಂಡು ನೆರೆದವರು ಕೈಮುಗಿದು ನಮಸ್ಕರಿಸಿದರು. ಸಿಎಂ ಆಗಿ ಮೊದಲ ದಸರಾದ ಸಂಭ್ರಮದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರು ಪತ್ನಿ ಉಷಾ ಅವರೊಂದಿಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಗಮನೆಳೆದರು.

ಕೆಂಪು ನೆಲ ಹಾಸಿನಲ್ಲಿ ಬರಮಾಡಿಕೊಂಡ ಗಣ್ಯರು ನೇರವಾಗಿ ಚಾಮುಂಡೇಶ್ವರಿ ದೇಗುಲಕ್ಕೆ ತೆರಳಿ ನಾಡದೇವಿಗೆ ಅಗ್ರಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ‘ಬ್ರಾಹ್ಮಿ ಅಲಂಕಾರ’ದಲ್ಲಿ ಕಂಗೊಳಿಸುತ್ತಿದ್ದ ತಾಯಿಯ ದರ್ಶನ ಪಡೆದ ಬಳಿಕ ಸಿಎಂ, ಗರ್ಭಗುಡಿಯ ಹೊಸ್ತಿಲಿಗೆ ಮತ್ತು ದೇವಿಯ ಪಾದುಕಿಗೆ ಹಣೆಹಚ್ಚಿ ನಮಸ್ಕರಿಸಿದರು. ವಿಘ್ನಗಳ ನಿವಾರಣೆಗಾಗಿ ಸಿಎಂ, ದೇವಸ್ಥಾನದ ಎದುರು ಈಡುಗಾಯಿ ಒಡೆದು ಅಂದುಕೊಂಡಿರುವ ಕಾರ್ಯ ನೆರವೇರಲಿ ಎಂದು ದೇವರ ಬಳಿ ಪ್ರಾರ್ಥಿಸಿಕೊಂಡರು.

ವೇದಿಕೆಯಲ್ಲಿ ಅಭಿನವ ಶ್ರೀಗಳಿಗೆ ಚಾಮುಂಡೇಶ್ವರಿ ಪ್ರತಿಮೆ ನೀಡಿ ಗೌರವಿಸಿದ್ದರೆ, ಸಿಎಂ ದಂಪತಿಗೆ ವಿನಾಯಕ ಪ್ರತಿಮೆ ನೀಡಿ ಸತ್ಕರಿಸಲಾಯಿತು. ದಕ್ಷಿಣ ಭಾರತ ಕುಂಬಮೇಳ ಎಂಬ ಹಿರಿಮೆ ಹೊಂದಿರುವ ಲಕ್ಷಾಂತರ ಜನರು ಸೇರುವ ಕೊಪ್ಪಳ ಜಾತ್ರೆಯ ರೂವಾರಿ ಅಭಿನವಶ್ರೀಗಳು ದಸರೆ ಸಂಭ್ರಮದಲ್ಲಿ ಒಬ್ಬರಾಗಿ ಸಡಗರಿಸಿದ್ದು ವಿಶೇಷ ಎನಿಸಿತು.

ಸರ್ವಧರ್ಮ ಸಂತರು ದಸರೆಗೆ ಮೊದಲ ಬಾರಿ ಸಾಕ್ಷಿ

ಸರ್ವಧರ್ಮ ಸಂತರು ದಸರೆಗೆ ಮೊದಲ ಬಾರಿ ಸಾಕ್ಷಿಯಾಗಿದ್ದು ಈ ಸಲದ ವಿಶಿಷ್ಟ. ಅಂದಾಜು 200 ವಿವಿಧ ಮಠಗಳ ಮಠಾಧೀಶರು, ಧರ್ಮಗಳು, ಧಾರ್ಮಿಕ ಮುಖಂಡರು ದಸರೆಯಲ್ಲಿ ಭಾಗಿಯಾಗಿ ಆಶೀರ್ವದಿಸಿದರು. ಇದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿತು.

ನದಿಗಳ ಸಂರಕ್ಷಣೆಗೆ ಶ್ರೀಗಳ ಕರೆ:

ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ಕಾವೇರಿ, ಕೃಷ್ಣೆ, ತುಂಗಭದ್ರೆಯಂತಹ ನದಿಗಳು ಬತ್ತಿಹೋದರೆ ಜನಜೀವನ ಸಂಕಷ್ಟಕ್ಕೆ ಸಿಲುಕುತ್ತದೆ. ಆದ್ದರಿಂದ ಸರ್ಕಾರಗಳು ನದಿಗಳ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂಚ್ಯವಾಗಿ ತಿಳಿ ಹೇಳಿದರು.

ಜತೆಗೆ, ಜನ ಸಮೂಹಕ್ಕೂ ಸಂದೇಶ ಕೊಟ್ಟ ಶ್ರೀಗಳು, ನೆಲ, ಜಲ ಮತ್ತು ಪರಿಸರವನ್ನು ರಕ್ಷಿಸುವುದು ಸರ್ಕಾರವಷ್ಟೇ ಅಲ್ಲ, ಪ್ರತಿಯೊಬ್ಬರ ಜವಾಬ್ದಾರಿ. ದೇವರ ಮುಂದೆ ಲಕ್ಷ ದೀಪಗಳನ್ನು ಹಚ್ಚುವುದರ ಜತೆಗೆ ಒಂದು ವೃಕ್ಷವನ್ನು ನೆಟ್ಟು ಬೆಳೆಸಿದರೆ ಅದು ಪ್ರಕೃತಿಗೆ ಸಲ್ಲಿಸುವ ನಿಜವಾದ ಸೇವೆಯಾಗುತ್ತದೆ ಎಂದು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು.

ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಎಲ್ಲವನ್ನೂ ಡೌನ್‌ಲೋಡ್ ಮಾಡಬಹುದು. ಆದರೆ, ರೊಟ್ಟಿ, ಮುದ್ದೆ, ಅನ್ನವನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ. ರೈತರು ಬೆಳೆದ ಬೆಳೆಗಳಿಂದಲೇ ನಮಗೆ ಆಹಾರ ದೊರೆಯುತ್ತದೆ. ಹೀಗಾಗಿ ರೈತರ ಶ್ರಮವನ್ನು ಗೌರವಿಸಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದೂ ಶ್ರೀಗಳು ಹೇಳಿದರು.

ಸಾಮಾಜಿಕ ಸಾಮರಸ್ಯ ಬಲಪಡಿಸಿ: ಸಿಎಂ ಅಭಿಮತ

ಬಹಳ ಲವಲವಿಕೆಯಿಂದ ಕಾಣಿಸಿಕೊಂಡ ಸಿಎಂ, ಸಮಾಜದಲ್ಲಿ ಜಾತಿ-ಧರ್ಮಗಳ ಆಧಾರದ ಮೇಲೆ ಜನರನ್ನು ಬೇರ್ಪಡಿಸುವ ಬದಲು ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಬೇಕು. ಧರ್ಮದ ಮೂಲ ಆಶಯ ಪ್ರೀತಿ, ಶಾಂತಿ ಮತ್ತು ಮಾನವೀಯತೆಯೇ ಆಗಿದೆ. ಪರಸ್ಪರ ಗೌರವ ಹಾಗೂ ಸಹೋದರತ್ವದಿಂದ ಬದುಕುವ ಮೂಲಕ ಸಾಮಾಜಿಕ ಸಾಮರಸ್ಯ ಬಲಪಡಿಸಬೇಕು ಎಂದು ಕರೆ ಕೊಟ್ಟರು.

ಒಂದೊಂದಾಗಿ ಅನಾವರಣ ವೈವಿಧ್ಯಮಯ ಕಾರ್ಯಕ್ರಮಗಳು

ಬಹಳ ವರ್ಷಗಳ ಬಳಿಕ ಮಧ್ಯಾಹ್ನದ ಹೊತ್ತಿಗೆ ದಸರೆಗೆ ಚಾಲನೆ ದೊರೆಯಿತು. ಇದು ಅಪರೂಪ ಘಳಿಗೆ. ಹೀಗಾಗಿ, ವಿವಿಧ ಕಾರ್ಯಕ್ರಮಗಳು ಮಧ್ಯಾಹ್ನ, ಸಂಜೆ ಸಮಯದಲ್ಲಿ ಒಂದೊಂದಾಗಿ ಅನಾವರಣಗೊಂಡವು. ಕುಪ್ಪಣ್ಣ ಉದ್ಯಾನ ಮತ್ತು ಲಿಂಗಾಂಬುಧಿ ಸಸ್ಯಶಾಸ್ತ್ರೀಯ ತೋಟದಲ್ಲಿ ಪುಷ್ಪಗಳ ಪ್ರಪಂಚ ಗರಿಬಿಚ್ಚಿ ಕುಸುಮ ಪ್ರಿಯರನ್ನು ಸ್ವಾಗತಿಸಿತು. ಇಲ್ಲಿಯ ಗಾಜಿನ ಮನೆಯಲ್ಲಿ ‘ವಿಧಾನಸೌಧ’ ಮಾದರಿಯ ಮುಖ್ಯ ಪುಷ್ಪ ಪರಿಕಲ್ಪನೆ ಈ ಸಲದ ಜನಾಕರ್ಷಣೆ. ಮಹಾರಾಜ ಕಾಲೇಜು ಮೈದಾನದಲ್ಲಿ ವಿವಿಧ ಖಾದ್ಯಗಳ ಪರಿಮಳ ಬೀರಿದ ಆಹಾರ ಮೇಳ, ಪೈಲ್ವಾರ ನಡುವಿನ ರೋಚಕ ಕಾದಾಟಕ್ಕೆ ವೇದಿಕೆಯಾದ ಕುಸ್ತಿ ಪಂದ್ಯಾವಳಿ, ಕಾವಾ ಕಾಲೇಜಿನಲ್ಲಿ ಚಿತ್ರಪ್ರಪಂಚವನ್ನು ತೆಗೆದಿಟ್ಟ ಲಲಿತಕಲಾ, ಕರಕುಶಲ ಪ್ರದರ್ಶನ ಆಕರ್ಷಿಸಿತು.

ಮತ್ತೊಂದೆಡೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಓದುಗರನ್ನು ಕೈಬಿಸಿ ಕರೆಯುತ್ತಿರುವ ಪುಸ್ತಕ ಮೇಳ, ಚಾಮುಂಡಿ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ದಸರಾ ಸಿಎಂ ಕಪ್ ಕ್ರೀಡಾಕೂಟಕ್ಕೂ ಚಾಲನೆ ದೊರೆಯಿತು. ಮೂರು ತಿಂಗಳು ಕಾಲ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ದಸರಾ ವಸ್ತುಪ್ರದರ್ಶನ ಸಹ ಸೂರ್ಯಾಸ್ತರ ಬಳಿಕ ತೆರೆದುಕೊಂಡಿತು.

ಅರಮನೆ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವಕ್ಕೂ ಚಾಲನೆ ದೊರೆಯಿತು. ವಿದ್ವಾನ್ ಡಾ.ಮೈಸೂರು ನಾಗವೇಣಿ ಶ್ರೀನಾಥ್ ರಾಜ್ಯಮಟ್ಟದ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಜೆ ಸಯ್ಯಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರದ ‘ಹಸಿರು ಚಪ್ಪರ’ವನ್ನು ಉದ್ಘಾಟಿಸುತ್ತಿದ್ದಂತೆ ಇಡೀ ಅರಮನೆ ನಗರಿ ಬೆಳಕಿನ ಸೊಬಗಿನಲ್ಲಿ ಹೊಳೆಯಿತು. ರಸ್ತೆ, ವೃತ್ತಗಳು ಮಿನುಗುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಿದವು. ಹೀಗೆ ದಸರೆ ಸಡಗರ, ಸಂಭ್ರಮ ಮನ ಮನೆಗಳಿಗೂ ಹರಡಿ ಹೊಸ ಹುಮ್ಮಸು ಮೂಡಿಸಿತು.

ನಾಡಹಬ್ಬ ದಸರಾ ಮಹೋತ್ಸವಕ್ಕೆ ಸಾಕ್ಷಿಯಾದ ಸಂತರು, ಮಠಾಧೀಶರು.

*5

*6

ಚಾಮುಂಡಿಬೆಟ್ಟದಲ್ಲಿ ಭಾನುವಾರ ಆಯೋಜಿಸಿದ್ದ ನಾಡಹಬ್ಬ ದಸರಾ ಮಹೋತ್ಸವವನ್ನು ಬೆಳ್ಳಿರಥದಲ್ಲಿ ವಿರಾಜಮಾನವಾಗಿದ್ದ ಪಂಚಲೋಹದ ಚಾಮುಂಡೇಶ್ವರಿದೇವಿ ಮೂರ್ತಿಗೆ ಸಿಎಂ ಡಿ.ಕೆ.ಶಿವಕುಮಾರ್ ಪುಷ್ಪ ನಮನ ಸಲ್ಲಿಸಿದರು. ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಶಿವರಾಜ ತಂಗಡಗಿ, ಈಶ್ವರ ಖಂಡ್ರೆ ಇತರರಿದ್ದರು.

*9

ಚಾಮುಂಡಿಬೆಟ್ಟದಲ್ಲಿ ಭಾನುವಾರ ಆಯೋಜಿಸಿದ್ದ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಚಾಮುಂಡೇಶ್ವರಿ ಮೂರ್ತಿ ನೀಡಿ ಸಿಎಂ ಡಿ.ಕೆ.ಶಿವಕುಮಾರ್ ಗೌರವಿಸಿದರು. ಡಾ.ಯತೀಂದ್ರ ಸಿದ್ದರಾಮಯ್ಯ, ಶಿವರಾಜ ತಂಗಡಗಿ ಇತರರಿದ್ದರು.

*12, 13, 14

ದಸರಾ ಉದ್ಘಾಟನೆಗೂ ಮುನ್ನ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿದ ದಂಪತಿ ಸಹಿತ ಡಿ.ಕೆ.ಶಿವಕುಮಾರ್ ಅವರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.