ತಿ.ನರಸೀಪುರ: ಪಟ್ಟಣದ ವಿದ್ಯೋದಯ ವೃತ್ತದ ಬಳಿರುವ ಶ್ರೀ ಗಣೇಶ ದೇವಸ್ಥಾನದಲ್ಲಿ ಮಂಗಳವಾರ ಬಿಜೆಪಿಯ ಹಿರಿಯ ಮುತ್ಸದಿ ನಾಯಕ, ಸರಳ, ಸಜ್ಜನಿಕೆಯ ರಾಜಕಾರಣಿ ಹಾಗೂ ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್ ಅವರ 67ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ದೇವಾಲಯದಲ್ಲಿ ತೋಟದಪ್ಪ ಬಸವರಾಜು ಮತ್ತು ಅಭಿಮಾನಿ ಬಳಗದ ವತಿಯಿಂದ ಸರಳವಾಗಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದಲ್ಲಿ ಅನಂತ್‌ಕುಮಾರ್ ಅವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು.
ಹಿರಿಯ ಮುಖಂಡ ತೋಟದಪ್ಪ ಬಸವರಾಜು ಮಾತನಾಡಿ, ಅನಂತ್‌ಕುಮಾರ್ ಅವರು ಅತ್ಯಂತ ಶಿಸ್ತುಬದ್ಧ ವ್ಯಕ್ತಿಯಾಗಿದ್ದು, ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಸೈದ್ಧಾಂತಿಕ ನೆಲೆಗಟ್ಟಿನ ಅಡಿಯಲ್ಲಿ ಬೆಳೆದವರು. ಹಾಗಾಗಿ ಅವರು ಪ್ರಾಮಾಣಿಕತೆ ಮತ್ತು ಕಾರ್ಯತತ್ಪರತೆಯಲ್ಲಿ ಮೇರು ವ್ಯಕ್ತಿಯಾಗಿದ್ದರು. ಅವರು ಕೇಂದ್ರ ಸಚಿವರಾಗಿದ್ದ ವೇಳೆ ಮೊಟ್ಟಮೊದಲ ಬಾರಿಗೆ ದೇಶದಲ್ಲಿ ಬಡಜನರಿಗಾಗಿ ಜನರಿಕ್ ಔಷಧ ಕೇಂದ್ರಗಳನ್ನು ಸ್ಥಾಪನೆ ಮಾಡಿದ್ದಲ್ಲದೆ, ದೇಶದಲ್ಲಿದ್ದ ರಸಗೊಬ್ಬರ ಅಭಾವವನ್ನು ತಗ್ಗಿಸಿದ್ದು ಅವರ ಹೆಗ್ಗಳಿಕೆ ಎಂದರು.
ಶಿಕ್ಷಕಿ ನಾಗರತ್ನಮ್ಮ ಬಸವರಾಜ್, ಮುಖಂಡರಾದ ಪ್ರದೀಪ್‌ಕುಮಾರ್, ನಾಗೇಶ್, ವೆಂಕರಮಣಶೆಟ್ಟಿ, ನಾಗಭೂಷಣ ಇತರರು ಇದ್ದರು.