ಮೈಸೂರಿನ ತಾರಾಲಯ PM Modi to visit Mysuru city on Nov 13
ಮೈಸೂರು

ನ.13ರಂದು ಮೈಸೂರು ನಗರಕ್ಕೆ ಪ್ರಧಾನಿ ಮೋದಿ

ಅತ್ಯಾಧುನಿಕ ತಾರಾಲಯ ಉದ್ಘಾಟನಾ ಸಮಾರಂಭ

ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ನಿರ್ಮಾಣಗೊಂಡಿರುವ ತಾರಾಲಯವನ್ನು ನ.13ರಂದು ಮಧ್ಯಾಹ್ನ 3ಕ್ಕೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ.

ಬೆಂಗಳೂರಿನಲ್ಲಿ ‘ನಮ್ಮ ಮೆಟ್ರೋ’ದ ಗುಲಾಬಿ ಮಾರ್ಗ ಉದ್ಘಾಟನೆ ಮಾಡಿದ ಬಳಿಕ ಮೈಸೂರಿಗೆ ಭೇಟಿ ನೀಡಲಿರುವ ಪ್ರಧಾನಿ, ರೂ. 115 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ತಾರಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕೆ.ಸಿ.ಬಡಾವಣೆಯಲ್ಲಿ ನಿರ್ಮಿಸಿರುವ ಮಿಯಾವಾಕಿ ಮಿನಿ ವನವನ್ನೂ ಉದ್ಘಾಟಿಸಲಾಗುತ್ತದೆ. ಕಾರ್ಯಕ್ರಮದಲ್ಲಿ 10 ಸಾವಿರ ಜನರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯಸಭಾ ಕ್ಷೇತ್ರ ಪ್ರದೇಶಾಭಿವೃದ್ಧಿ ಯೋಜನೆಯಡಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರೂ. 5 ಕೋಟಿ ಅನುದಾನ ನೀಡಿದ್ದಾರೆ. ಫ್ರಾನ್ಸ್‌ನಲ್ಲಿ ಸಮತಟ್ಟಾದ ತಾರಾಲಯ ಇದೆ.

ಅದನ್ನು ಹೊರತು ಪಡಿಸಿದರೆ ಎಲ್‌ಇಡಿ ಬಾಗಿದ ಗುಮ್ಮಟ ಹೊಂದಿರುವ ವಿಶ್ವಮೊಟ್ಟ ಮೊದಲ ತಾರಾಲಯ ಇದಾಗಿದೆ. ಶೈಕ್ಷಣಿಕ, ಪ್ರವಾಸೋದ್ಯಮ, ವಿಜ್ಞಾನ ಕ್ಷೇತ್ರಕ್ಕೆ ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.

ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆಯಿಂದ ನಿರ್ಮಿಸಿರುವ ಈ ಪ್ಲಾನಿಟೋರಿಯಂ ಅತ್ಯಾಧುನಿಕವಾಗಿದ್ದು, ಇದಕ್ಕೆ ಮೈಸೂರು ವಿಶ್ವವಿದ್ಯಾಲಯದ ಸಹಯೋಗ ಸಹ ಇದೆ ಎಂದರು.