ತುಂಗೆಯ ನಾಡಿನಿಂದ ಕಾವೇರಿ ನಾಡಿಗೆ ಬಂದಿರುವ ಶತಮಾನದ ಬಳುವಳಿಯಾಗಿರುವ ದಸರಾ ಮಹೋತ್ಸವಕ್ಕೆ ಕಲ್ಯಾಣ ಕರ್ನಾಟಕದ ಸಂತ ಕೊಪ್ಪಳದ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಈ ಭಾಗದ ದಸರೆಯನ್ನು ಉದ್ಘಾಟಿಸಿದ ಮೊದಲ ಶ್ರೀಗಳು ಎಂಬ ಹಿರಿಮೆಗೂ ಪಾತ್ರರಾದರು.
ಇತಿಹಾಸದ ದೃಷ್ಟಿಯಿಂದ ತುಂಗಭದ್ರೆ (ಅಥವಾ ತುಂಗಾ) ತೀರದಿಂದ ಕಾವೇರಿ ತೀರಕ್ಕೆ ಹರಿದು ಬಂದ ಈ ದಸರೆಯ ಸಾಂಸ್ಕೃತಿಕ ಬೇರುಗಳಲ್ಲಿ ಕೊಪ್ಪಳದ ಕುಮಾರ ರಾಮನ ಕಾಲದ ಆಚರಣೆಗಳ ಹಿನ್ನೆಲೆಯೂ ಇದೆ ಎಂದು ನಂಬಲಾಗುತ್ತದೆ. ಈ ಐತಿಹಾಸಿಕ ನಂಟನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ, ಇದೇ ಪರಂಪರೆಯ ಸಂಕೇತವಾಗಿ ಮೈಸೂರು ದಸರಾವನ್ನು ಕೊಪ್ಪಳದ ಶ್ರೀಗಳು ಉದ್ಘಾಟಿಸಿದ್ದು ವಿಶೇಷ, ಅರ್ಥಪೂರ್ಣ ಸಂಗತಿ ಎನಿಸಿದೆ.
14ನೇ ಶತಮಾನದಲ್ಲಿ ಕೊಪ್ಪಳ ಗಂಡುಗಲಿ ಕುಮಾರ ರಾಮ ತನ್ನ ಆಡಳಿತದಲ್ಲಿ ದುರ್ಗಾದೇವಿಯ ಆರಾಧನೆಗಾಗಿ ನವರಾತ್ರಿ ಉತ್ಸವ ಆಚರಿಸುತ್ತಿದ್ದರು. ಬಳಿಕ ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಮಹಾನವಮಿ ಉತ್ಸವವಾಗಿ ರೂಪಗೊಂಡಿತು. ನಂತರ ಅಲ್ಲಿಂದ ಮೈಸೂರು ಒಡೆಯರ ಕಾಲಕ್ಕೆ ವರ್ಗಾವಣೆಗೊಂಡಿತು. ದೊರೆಯ ಹಬ್ಬವಾಗಿದ್ದ ಇದು, ಇದೀಗ ಧರೆಯ ಹಬ್ಬವಾಗಿ ವಿಶ್ವವಿಖ್ಯಾತಿ ಪಡೆದುಕೊಂಡಿದೆ ಎಂದು ಇತಿಹಾಸವನ್ನು ಗವಿಮಠಶ್ರೀಗಳು ತಮ್ಮ ಭಾಷಣದಲ್ಲಿ ಬಣ್ಣಿಸಿದರು.
‘ಶಿಕ್ಷಣ, ಶಾಲೆಗಳ ಅಭಿವೃದ್ಧಿ ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು’ ಎಂದು ಜನರಿಗೆ ಗುರಿಯನ್ನು ಕೊಟ್ಟ ಶ್ರೀಗಳು, ‘ಶಿಕ್ಷಣ ಎಲ್ಲರಿಗೂ ದೊರೆಯಬೇಕು. ಸಮಾಜದಲ್ಲಿ ಪ್ರೀತಿ ಮತ್ತು ಸಹಬಾಳ್ವೆ ಬೆಳೆಯಬೇಕು. ರಾಜ್ಯ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು’ ಎಂದು ಕರೆ ನೀಡಿದರು.
ಮೈಸೂರು ದಸರಾ ಕೇವಲ ಉತ್ಸವವಲ್ಲ. ಅದು ನಾಡಿನ ಸಂಸ್ಕೃತಿ, ಪರಂಪರೆ, ಮಾನವೀಯತೆ, ಸಾಮರಸ್ಯದ ಸಂಕೇತ. ಐತಿಹಾಸಿಕ ನಗರದಲ್ಲಿ ನಡೆಯುವ ದಸರಾ ಮಹೋತ್ಸವದ ವೈಭವದ ಹಿಂದೆ ಸಾವಿರಾರು ಕಾಣದ ಕೈಗಳ ಪರಿಶ್ರಮವಿದೆ. ಇದು ಜನಸಾಮಾನ್ಯರ ಉತ್ಸವ ಎಂದು ಹೇಳಿದರು.
ಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ದಸರಾ ಹಬ್ಬದ ಸಂಭ್ರಮ ಮೈಸೂರಿಗೆ ಮಾತ್ರ ಸೀಮಿತವಾಗದೆ ಇಡೀ ರಾಜ್ಯಕ್ಕೆ ಹರಡಿಕೊಂಡಿದೆ. ಭಾರತೀಯ ಪರಂಪರೆಗೆ ಕನ್ನಡಿ ಹಿಡಿಯುವ ಈ ಮಹೋತ್ಸವ ನಾಡಿನ ಹೆಮ್ಮೆಯ ಸಂಕೇತ ಎಂದು ಬಣ್ಣಿಸಿದರು.
ದಸರಾ ಮಗುವಿಗೆ ಬಣ್ಣಗಳ ಹಬ್ಬ, ಕಲಾವಿದನಿಗೆ ಅದ್ಭುತ ವೇದಿಕೆ, ವ್ಯಾಪಾರಿಗೆ ಉತ್ತಮ ಅವಕಾಶ. ಪ್ರವಾಸಿಗನಿಗೆ ಮರೆಯಲಾಗದ ಅನುಭವ. ಮೈಸೂರು ತನ್ನ ಸಾಂಸ್ಕೃತಿಕ ಅಸ್ಮಿತೆ ಮತ್ತೊಮ್ಮೆ ಕಂಡುಕೊಳ್ಳುವ ಸಂದರ್ಭವೂ ಹೌದು. ಕೆಲವು ನಗರಗಳು ಯುದ್ಧ, ಹೋರಾಟಗಳಿಂದ ಬೆಳೆದರೆ, ಮೈಸೂರು ತನ್ನ ಸಂಸ್ಕೃತಿಯಿಂದ ಬೆಳೆದಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ದಸರಾ ನಾಡಿನ ಸಂಸ್ಕೃತಿ, ಪರಂಪರೆ, ಶಾಂತಿ-ಸೌಹಾರ್ದತೆ ಪ್ರತಿಬಿಂಬಿಸುವ ನಾಡಹಬ್ಬ. ದಸರಾ ಯಾವುದೇ ಒಂದು ಧರ್ಮ ಅಥವಾ ಜಾತಿಗೆ ಸೀಮಿತವಾದ ಹಬ್ಬವಲ್ಲ. ಇದು ಕರ್ನಾಟಕದ ಸಮಸ್ತ ಜನರನ್ನು ಒಗ್ಗೂಡಿಸುವ, ನಾಡಿನ ವೈವಿಧ್ಯಮಯ ಸಂಸ್ಕೃತಿ ಮತ್ತು ಪರಂಪರೆ ಪರಿಚಯಿಸುವ ಮಹೋತ್ಸವವಾಗಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್.ತಂಗಡಗಿ ಮಾತನಾಡಿ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕುಮ್ಮಟದುರ್ಗ ಹಾಗೂ ಹೇಮಕೂಟ ಪ್ರದೇಶದಲ್ಲಿ ಗಂಡುಗಲಿ ಕುಮಾರರಾಮನ ಆಡಳಿತಾವಧಿಯಲ್ಲಿ ಶಕ್ತಿ ಪ್ರದರ್ಶನವು ವಿಜಯದ ಸಂಕೇತವಾಗಿ ದಸರಾ, ನವರಾತ್ರಿ ಆಚರಣೆಗಳಿಗೆ ಭದ್ರ ಅಡಿಪಾಯ ಹಾಕಲಾಯಿತು. ಆ ನಂತರ ಆನೆಗುಂದಿ ಹಾಗೂ ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ದಸರಾವನ್ನು ವಿಜೃಂಭಣೆಯಿಂದ 300ಕ್ಕೂ ಹೆಚ್ಚು ವರ್ಷಗಳ ಕಾಲ ಆಚರಿಸಿಕೊಂಡು ಬರಲಾಯಿತು ಎಂದರು.
ಕಳೆದ ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ ಹೊಗಳಿ ಸ್ವಪಕ್ಷೀಯರಾದ ಜೆಡಿಎಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದ ಶಾಸಕ ಜಿ.ಟಿ.ದೇವೇಗೌಡ ಈ ಸಲ ಸಿಎಂ ಡಿ.ಕೆ.ಶಿವಕುಮಾರ್ ಗುಣಗಾನ ಮಾಡಿದರು.
ಸಿದ್ದರಾಮಯ್ಯ ಮೈಸೂರಿನ ಮಗನಾದರೆ, ಡಿ.ಕೆ.ಶಿವಕುಮಾರ್ ಅವರು ಮೈಸೂರಿನ ಅಳಿಯ. ಇವರಿಗೆ ಹಿಂದೆ ಗುರು ಮುಂದೆ ಗುರಿ ಇಟ್ಟುಕೊಂಡು ಸಿಎಂ. ರಂಭಾಪುರಿ ಮಠದ ಸ್ವಾಮೀಜಿಗಳ ಆಶೀರ್ವಾದ ಇವರ ಮೇಲಿದೆ. ಮಠಮಾನ್ಯಗಳ ಸಾಧು ಸಂತರ ಮೇಲೆ ಅಪಾರ ಗೌರವವನ್ನು ಹೊಂದಿದ್ದಾರೆ. ಅದಕ್ಕಾಗಿ ದಸರಾಗೆ ಸಾಧು ಸಂತರನ್ನು ಕರೆಸಿ ದಸರಾ ಉದ್ಘಾಟನೆ ಮಾಡಿದ್ದಾರೆ ಎಂದು ಪ್ರಶಂಸಿದರು.
* ಗವಿಸಿದ್ದೇಶ್ವರ ಶ್ರೀಗಳಿಗೆ ಚಾಮುಂಡೇಶ್ವರಿ ಮೂರ್ತಿ ನೀಡಿ ಸನ್ಮಾನಿಸಿದ ಸಿಎಂ
* ತಮಗೆ ಹಾಕಲು ಬಂದ ಪೇಟ ಹಾರ ಶಾಲು ಎಲ್ಲವನ್ನೂ ಸಿಎಂಗೆ ಹಾಕಿದ ಗವಿಸಿದ್ದೇಶ್ವರ ಶ್ರೀಗಳು
* ಮುಂದಿನ ಸಾಲಿನಲ್ಲಿ ಪುಟ್ಟರಂಗಶೆಟ್ಟಿಗೆ ಹಾಕಿದ್ದ ಚೇರ್‌ನಲ್ಲಿ ಕುಳಿತಿದ್ದ ಶಾಸಕ ಕೆ.ವೆಂಕಟೇಶ್. ಪುಟ್ಟರಂಗಶೆಟ್ಟಿ ಬಂದ ಮೇಲೆ ಚೇರ್ ಬಿಟ್ಟು ವೇದಿಕೆಯಿಂದ ನಿರ್ಗಮಿಸಿದರು.
* ಭಾಷಣದ ವೇಳೆ ಸಚಿವ ಡಾ.ಯತೀಂದ್ರ ಎಡವಟ್ಟು. ಡಿ.ಕೆ.ಶಿವಕುಮಾರ್ ಪತ್ನಿ ಹೆಸರನ್ನು ಉಷಾ ಎನ್ನುವ ಬದಲು ಗೀತಾ ಎಂದರು.
* ಭಾಷಣದ ಅಂತ್ಯದಲ್ಲಿ ‘ಜೈ ಕಾಂಗ್ರೆಸ್’ ಎಂದು ಹೇಳಿದ ಸಚಿವ ಯತೀಂದ್ರ. ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಪರವಾಗಿ ಜೈ ಎಂದಿದ್ದು ಚರ್ಚೆಗೆ ಗ್ರಾಸ