ಪಿರಿಯಾಪಟ್ಟಣ: ಕ್ರೀಡೆಗಳು ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಸದೃಢತೆ, ಶಿಸ್ತು, ನಾಯಕತ್ವ ಗುಣ ಹಾಗೂ ತಂಡದ ಮನೋಭಾವ ಬೆಳೆಸಲು ಸಹಕಾರಿ ಎಂದು ರೋಟರಿ ಜಿಲ್ಲಾ ಸದಸ್ಯತ್ವ ಹಾಗೂ ಕ್ಲಬ್ ವಿಸ್ತರಣೆ ಅಧ್ಯಕ್ಷ ಎಚ್.ಟಿ.ಅನಿಲ್ ಹೇಳಿದರು.
ಪಿರಿಯಾಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ರೋಟರಿ ಪಿರಿಯಾಪಟ್ಟಣ ಮಿಡ್ಟೌನ್ನಿಂದ ಆಯೋಜಿಸಿದ್ದ ವಲಯ 6 ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಯುವಜನರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಇಂತಹ ಪಂದ್ಯಾವಳಿಗಳು ಸ್ನೇಹ, ಒಗ್ಗಟ್ಟು ಹಾಗೂ ಕ್ರೀಡಾ ಮನೋಭಾವ ಬೆಳೆಸಲು ಸಹಕಾರಿಯಾಗಿವೆ ಎಂದರು.
ರೋಟರಿ ಪಿರಿಯಾಪಟ್ಟಣ ಮಿಡ್ಟೌನ್ ಅಧ್ಯಕ್ಷ ಬಲರಾಮ್ ಮಾತನಾಡಿ, ರೋಟರಿ ಸಂಸ್ಥೆ ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಜನರಿಗೆ ನೆರವಾಗುತ್ತಿದ್ದು, ಆರೋಗ್ಯ, ಶಿಕ್ಷಣ, ಪರಿಸರ ಹಾಗೂ ಮಾನವೀಯ ಸೇವೆಗೆ ಆದ್ಯತೆ ನೀಡುತ್ತಿದೆ. ಕ್ರೀಡಾ ಚಟುವಟಿಕೆಗಳ ಮೂಲಕ ಸದಸ್ಯರ ನಡುವೆ ಸ್ನೇಹ, ಒಗ್ಗಟ್ಟು ಮತ್ತು ಸೇವಾ ಮನೋಭಾವ ಬೆಳೆಸುವುದು ಪಂದ್ಯಾವಳಿಯ ಉದ್ದೇಶ ಎಂದರು.
ಪಂದ್ಯಾವಳಿಯಲ್ಲಿ, ಹುಣಸೂರು, ಶನಿವಾರಸಂತೆ, ಆಲೂರು ಸಿದ್ದಾಪುರ, ಸೋಮವಾರಪೇಟೆ, ಮಡಿಕೇರಿ, ಕೊಡ್ಲಿಪೇಟೆ, ಕೆ.ಆರ್.ನಗರ, ಪಿರಿಯಾಪಟ್ಟಣ ಐಕಾನ್ಸ್ ಸೇರಿದಂತೆ ಒಟ್ಟು 8 ತಂಡಗಳು ಭಾಗವಹಿಸಿದ್ದವು.
ಜಿಲ್ಲಾ ಕ್ರೀಡಾ ಅಧ್ಯಕ್ಷ ಸಂತೋಷ್ ಶೆಟ್ಟಿ, ಸಹಾಯಕ ಪ್ರಾಂತಪಾಲರಾದ ಎಂ.ಡಿ.ರಂಗಸ್ವಾಮಿ, ಸಿ.ಎನ್.ವಿಜಯ್, ರಾಘವೇಂದ್ರ, ವಸಂತ ಕುಮಾರ್, ವಲಯ ಸೇನಾನಿ ಎಂ.ಎಂ.ರಾಜೇಗೌಡ, ಕೆ.ಪಿ.ಪ್ರಸನ್ನ, ಬಿ.ಎಸ್.ಹರೀಶ್, ಸಿ.ಟಿ.ಗುರುದತ್, ಟಿ.ಕೆ.ಚೇತನ್ ಹಾಗೂ ಕ್ಲಬ್ನ ಸದಸ್ಯರು ಇದ್ದರು.